Connect with us

Dvg Suddi-Kannada News

ದಾವಣಗೆರೆ:ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ ಅನಿವಾರ್ಯ ; ಜಿಲ್ಲಾಧಿಕಾರಿ

ಪ್ರಮುಖ ಸುದ್ದಿ

ದಾವಣಗೆರೆ:ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ ಅನಿವಾರ್ಯ ; ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ,ದಾವಣಗೆರೆ:ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಗಿದ್ದು, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಕರ್ಫ್ಯೂ ವಿಧಿಸಲಾಗಿದ್ದರೂ ಸಹ ಜನರು ಗುಂಪು ಗುಂಪಾಗಿ ರಸ್ತೆಗಿಳಿಯುತ್ತಿರುವುದು ಕಂಡು ಬರುತ್ತಿದೆ. ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಷಬ್ ಎ ಬಾರತ್ ಹಾಗೂ ಗುಡ್‍ಫ್ರೈಡೇ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ನಾಗರೀಕ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರೋನಾ ರೋಗ ಜಾಗೃತಿಗಾಗಿ ರಸ್ತೆಗಿಳಿಯುವವರಿಗೆ ಮಂಗಳಾರತಿ, ಹೂ ಮಾಲೆ ಹಾಕುವುದು, ವಿನಂತಿಸುವುದು, ಗದರಿಸುವುದು, ಆದೇಶಿಸುವುದನ್ನು ಇಲ್ಲಿಯವರೆಗೆ ಮಾಡಿ ಮಾಡಿ ಸಾಕಾಯ್ತು. ಆದರೂ ಸಹ ರಸ್ತೆಗಿಳಿಯುವವರ ಮಾತ್ರ ಕಡಿಮೆಯಾಗುತ್ತಿಲ್ಲ. ಕುಂಟು ನೆಪ ಹೇಳಿ, ವಿನಾಕಾರಣ ಜನರು ರಸ್ತೆಗಿಳಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಇನ್ನು ಮುಂದೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದರು.

ಜನಸಾಮಾನ್ಯರಿಗೆ ಅಗತ್ಯ ದಿನಸಿ ಸಾಮಗ್ರಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಮನೆಯ ಬೀದಿಗಳಲ್ಲಿಯೇ ದೊರೆಯುವಂತೆ ಅವಕಾಶ ಕಲ್ಪಿಸಲಾಗಿದೆ. ಆದರೂ ಕುಂಟು ನೆಪ ಹೇಳಿ ರಸ್ತೆಗಿಳಿಯುವ ಜನರ ವಿರುದ್ದ ಇನ್ನು ಮುಂದೆ ಪ್ರಕರಣ ದಾಖಲಿಸಲಾಗುವುದು. ಇದಕ್ಕೆ ಅವಕಾಶ ನೀಡದೇ ಜನರು ಮನೆಯಲ್ಲಿದ್ದು, ರೋಗ ಜಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದರು.
ವ್ಯಾಪಾರಸ್ಥರು ಸಾಮಾಜಿಕ ಅಂತರ ವ್ಯವಹರಿಸಿದಲ್ಲಿ ಅಂತಹ ವ್ಯಾಪಾರಸ್ಥರ ಪರವಾನಗಿಯನ್ನು ರದ್ದುಪಡಿಸಲಾಗುವುದು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಜಾಗೃತರಾಗಿದ್ದಾರೆ. ಆದರೆ ನಗರ ವಾಸಿಗಳು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿಯಮ ಉಲ್ಲಂಘನೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕಾನೂನು ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಲು ಸಂಪೂರ್ಣ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಿದ್ದು, ಜನಸಾಮಾನ್ಯರು ಅನಗತ್ಯವಾಗಿ ರಸ್ತೆಗಿಳಿದರೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು. ಇದಕ್ಕೆ ಸಾರ್ವಜನಿಕರು ಅವಕಾಶ ನೀಡದಿರುವಂತೆ ಎಚ್ಚರಿಸಿದರು.
ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಸ್ವಚ್ಚತೆ ಹಾಗೂ ದೈನಂದಿನ ಪೂಜೆ, ಪ್ರಾರ್ಥನೆ ಮಾಡಲು ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ ಸಾರ್ವಜನಿಕರು ಮನೆಯಲ್ಲಿದ್ದು, ಪ್ರಾರ್ಥನೆ, ನಮಾಜ್, ಪೂಜೆ ಮಾಡುವಂತೆ ತಿಳಿಸಿದರು.

ರಸ್ತೆಗಿಳಿಯುವ ಬೈಕ್ ಸವಾರರಿಗೆ ಸಮುದಾಯಗಳ ಮುಖಂಡರು ಜಾಗೃತಿ ಮೂಡಿಸಿ ಮನೆಯಲ್ಲಿರಲು ಸೂಚಿಸಬೇಕು. ಎಲ್ಲ ಕಾರ್ಯಗಳನ್ನು ಜಿಲ್ಲಾಡಳಿತದ ಮೇಲೆ ಹಾಕಬೇಡಿ ಇದರಲ್ಲಿ ನಿಮ್ಮ ಹೊಣೆಗಾರಿಕೆ ಸಹ ಮುಖ್ಯವಾಗಿ ಇದೆ ಎಂದು ಅರಿತು ನಡೆಯಬೇಕು ಎಂದರು.
ದಾವಣಗೆರೆ ಸೇರಿದಂತೆ ಅಕ್ಕ ಪಕ್ಕದ 4 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವ್ ಕೇಸ್‍ಗಳು ಸದ್ಯಕ್ಕೆ ನೆಗೆಟಿವ್ ಎಂದು ವರದಿಯಾಗಿವೆ. ದೇಶದಲ್ಲಿ ಹಾಕಲಾಗಿರುವ ಲಾಕ್‍ಡೌನ್ ಅವಧಿ ಇನ್ನೂ ಮುಂದುವರೆಯಬಹುದು. ಆದ ಕಾರಣ ಸಾರ್ವಜನಿಕರು ರೋಗ ನಿಯಂತ್ರಣಕ್ಕೆ ಮನೆಯಲ್ಲಿರುವುದೇ ಮದ್ದು ಎಂದರು.
ಮುಸ್ಲಿಂ ಸಮುದಾಯದ ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿ, ಮುಸ್ಲಿಂ ಸಮುದಾಯದ ಜನರೆಲ್ಲರೂ ಷಬ್ ಎ ಬಾರತ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಸಾಂಕೇತಿಕವಾಗಿ ಮನೆಯಲ್ಲಿಯೇ ಆಚರಿಸೋಣ. ನಾಗರೀಕರೆಲ್ಲರೂ ಸೌಹಾರ್ದತೆಯಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಹಬ್ಬವನ್ನು ಆಚರಿಸೋಣವೆಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ ಮಾತನಾಡಿ, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ. ನಮ್ಮೆಲ್ಲರ ಮೂಲ ಧ್ಯೇಯ ಕೊರೋನಾ ರೋಗ ನಿಯಂತ್ರಣವಾಗಿರಲಿ. ಹೇರಲಾದ ಲಾಕ್‍ಡೌನ್ ಅವಧಿ ಮುಗಿಯುವದರೊಳಗೆ ಕೊರೋನಾ ನಿಯಂತ್ರಣ ಮಾಡೋಣ. ದಾವಣಗೆರೆ ಜಿಲ್ಲೆಯು ಶಾಂತಿಗೆ ಹೆಸರಾಗಿದ್ದು, ಜಿಲ್ಲೆಯು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಲಿ ಎಂದರು.

ಸಭೆಯಲ್ಲಿ ಜಿಲ್ಲಾ ವಕ್ಪ್ ಸಮಿತಿ ಅಧ್ಯಕ್ಷ ಮಹಮ್ಮದ್ ನಿಯಾಜ್, ದುರ್ಗಾಂಬಿಕ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ ಸೇರಿದಂತೆ ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top