Connect with us

Dvgsuddi Kannada | online news portal | Kannada news online

ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಕೃಷಿ ಸಚಿವ ಬಿ.ಸಿ. ಪಾಟೀಲ್

ಪ್ರಮುಖ ಸುದ್ದಿ

ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಕೃಷಿ ಸಚಿವ ಬಿ.ಸಿ. ಪಾಟೀಲ್

ಡಿವಿಜಿ ಸುದ್ದಿ, ದಾವಣಗೆರೆ : ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಸಮಯದಲ್ಲಿ ಕಳಪೆ ಬೀಜ ವಿತರಿಸಿದರೆ ರೈತರನ್ನು ನೇರವಾಗಿ ಕೊಲೆ ಮಾಡಿದಂತಾಗುತ್ತದೆ. ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.

ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೊರೊನಾ ವೈರಸ್ ನಿಯಂತ್ರಣಹಾಗೂ ರೈತರಿಗೆ ಮಾರುಕಟ್ಟೆ ಒದಗಿಸುವ ಕುರಿತು ಕರೆಯಲಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರು ಸಹ ಅವರ ಮೇಲೆ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಿ, ಅಂಗಡಿ ಪರವಾನಗಿಯನ್ನು ರದ್ದುಪಡಿಸಲಾಗುವದು ಎಂದರು.

ಲಾಕ್‍ಡೌನ್ ಅವಧಿಯಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚಿಸಿದಂತೆ ಕೃಷಿ ಮತ್ತು ವೈದ್ಯಕೀಯ ಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಿ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಮಾರುಕಟ್ಟೆಗೆ ಬಂದು ಬೆಳೆ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಲಾಕ್‍ಡೌನ್ ತೆರವಾಗಿಲ್ಲ. ಮೈಮರೆಯದಂತಹ ಭೀಕರ ಪರಿಸ್ಥಿತಿ ಇದಾಗಿದೆ. ಒಂದು ಸಂತೋಷದ ವಿಷಯವೇನೆಂದರೆ ಇಲ್ಲಿಯವರೆಗೂ ಯಾವೊಬ್ಬ ರೈತರಿಗೂ ಸಹ ಕೊರೊನಾ ವೈರಸ್ ಸೋಂಕು ತಗುಲಿಲ್ಲ. ಅವರು ಕೃಷಿ ಚಟುವಟಿಕೆಗಳಲ್ಲಿ ನಿರಂತರವಾಗಿ ನಿರತರಾಗಿರುವುದರಿಂದ ಅವರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು. ರೈತರು ಲಾಕ್‍ಡೌನ್ ಹಿನ್ನೆಲೆಯಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಧೃತಿಗೆಡದೆ ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಬೇಕು. ಸರ್ಕಾರವು ಸದಾ ನಿಮ್ಮೊಂದಿಗೆ ಇದೆ ಎಂದು ರೈತರಿಗೆ ಭರವಸೆ ನೀಡಿದರು.

ಬಳ್ಳಾರಿ, ಕೊಪ್ಪಳ ಜಿಲ್ಲೆ ಸೇರಿದಂತೆ 75 ಸಾವಿರ ಎಕರೆ ಪ್ರದೇಶದಲ್ಲಿ ಆಲಿಕಲ್ಲು ಮಳೆಯಿಂದಾಗಿ ರೈತರು ಬೆಳೆದ ಭತ್ತದ ಬೆಳೆ ಹಾನಿಗಿಡಾಗಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಆರ್‍ಎಫ್ ಅನುದಾನದಡಿ 47 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಅಧಿಕಾರಿಗಳು ಜಿಪಿಎಸ್ ಸರ್ವೆ ಮಾಡಿದರೆ ಸಾಲದು, ಸ್ವತಹ ರೈತರ ಜಮೀನಿಗೆ ತೆರಳಿ ಪರಿಶೀಲಿಸಿ ಪರಿಹಾರ ವಿತರಿಸಬೇಕು ಎಂದರು.

ಕಳಪೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ರಾಜ್ಯಮಟ್ಟದಲ್ಲಿ ತಂಡ ರಚಿಸಿ, ಕಾರ್ಯ ನಿರ್ವಹಿಸುತ್ತಿದೆ. ಈ ತಂಡವು ಜಿಲ್ಲೆಗೆ ಬಂದು ಕಳಪೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚುವವರೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಕಳಪೆ ಬೀಜ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಜಿಲ್ಲಾಮಟ್ಟದ ಅಧಿಕಾರಿಗಳು ವಿಫಲರಾದಲ್ಲಿ ನೇರವಾಗಿ ಅಧಿಕಾರಗಳನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ಒಟ್ಟು ಈವರೆಗೆ ಕಳಪೆ ಬೀಜ ಮಾರಾಟ ಮಾಡುವವರ ಮೇಲೆ 32 ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದರು.
ಲಾಕ್‍ಡೌಔನ್ ಹಿನ್ನೆಲೆಯಲ್ಲಿ ಯಾವುದೇ ಧಾರ್ಮಿಕ ಸಭೆ, ಮದುವೆ ಸಮಾರಂಭ ಹಾಗೂ ದೇವಾಸ್ಥಾನಗಳು ತೆರೆದಿಲ್ಲ. ಇದರಿಂದ ರಾಜ್ಯದಲ್ಲಿ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿರುವುದನ್ನು ಮನಗಂಡು ಮುಖ್ಯಮಂತ್ರಿಗಳು ವರದಿ ಪಡೆದು ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಆಲಿಕಲ್ಲು ಮಳೆಯಿಂದಾಗಿ 29 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗಿಡಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಮತ್ತು ಅತೀ ಸಣ್ಣ ರೈತರ ಸಂಖ್ಯೆ ಅಧಿಕವಾಗಿದೆ. 3.20 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದ್ದು, 1.36 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಇದೆ. ಆಗಸ್ಟ್‍ನಿಂದ ಸೆಪ್ಟೆಂಬರ್‍ವರೆಗೆ ಒಟ್ಟು 1.41 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಅಗತ್ಯವಿದ್ದು, 23,241 ಮೆಟ್ರಿಕ್ ಟನ್ ಪ್ರಸ್ತುತ ದಾಸ್ತಾನಿದೆ. ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಬಾರದೆಂದು ಕೃಷಿ ಬೆಳೆ ಸಾಗಾಟಕ್ಕೆ ಹಾಗೂ ಮಾರಾಟಗಾರರಿಗೆ ಸೇರಿದಂತೆ ಒಟ್ಟು 840 ಪಾಸ್‍ಗಳನ್ನು ಜಿಲ್ಲೆಯಾದ್ಯಂತ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಶೇಂಗಾ ಬೀಜವು 3 ಸಾವಿರ ಕ್ವಿಂಟಾಲ್ ಅಗತ್ಯವಿದ್ದು, 2 ಸಾವಿರ ಕ್ವಿಂಟಾಲ್ ದಾಸ್ತಾನು ಇದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನಾರ ಮಾತನಾಡಿ, ಜಿಲ್ಲೆಯಲ್ಲಿ ತರಕಾರಿ ಹಾಗೂ ಹಣ್ಣುಗಳಿಗೆ ಎರಡು ಕಡೆ ಮಾರುಕಟ್ಟೆ ತೆರೆಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ. ತರಕಾರಿ ಹಾಗೂ ಹಣ್ಣು ಬೆಳೆದ ರೈತರ ಜಮೀನುಗಳಿಗೆ ಭೇಟಿ ನೀಡಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಜಿಲ್ಲಾಮಟ್ಟದಲ್ಲಿ ರೈತರ ಅನುಕೂಲಕ್ಕಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಸಹಾಯವಾಣಿ ಆರಂಭಿಸಲಾಗಿದೆ ಎಂದರು.

ದಾವಣಗೆರೆ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಕೋವಿಡ್-19 ರೋಗ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂಗಳ ಚೆಕ್‍ನ್ನು ಕೃಷಿ ಸಚಿವರಿಗೆ ನೀಡಿದರು.

ಸಂಸದ ಜಿ.ಎಂ ಸಿದ್ದೇಶ್ವರ್ ಶಾಸಕ ಎಂ.ಪಿ.ರೇಣುಕಾಚಾರ್ಯ, ಪ್ರೊ.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಎಸ್.ಎ.ರವೀಂದ್ರನಾಥ್ ಅವರು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top