Connect with us

Dvgsuddi Kannada | online news portal | Kannada news online

ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ : ಮಹಾಂತೇಶ ಬೀಳಗಿ

ದಾವಣಗೆರೆ

ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ : ಮಹಾಂತೇಶ ಬೀಳಗಿ

ಡಿವಿಜಿ, ಸುದ್ದಿ, ದಾವಣಗೆರೆ: ಹಣ, ಅಧಿಕಾರಕ್ಕಿಂತ ಜ್ಞಾನ ಮುಖ್ಯ. ಜ್ಞಾನದ ಬೆನ್ನು ಹತ್ತಿದರೆ ಎಲ್ಲವನ್ನೂ ಪಡೆಯಬಹುದು. ಯಶಸ್ಸಿನ ಉನ್ನತಿಯನ್ನು ತಲುಪಲು ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಜ್ಞಾನವೆಂದರೆ ಪರೀಕ್ಷೆಗಾಗಿ ಓದುವ ಅಭ್ಯಾಸವಲ್ಲ. ಬದುಕನ್ನು ರೂಪಿಸುವ ಅನುಭವ, ಅರಿವು. ಈ ಜ್ಞಾನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಜ್ಞಾನ ಒಂದಿದ್ದರೆ ಜಗತ್ತಿನಲ್ಲಿ ಏನೆಲ್ಲವನ್ನೂ ಸಾಧನೆ ಮಾಡಬಹುದು. ಈ ಸಾಧನೆಗೆ ಛಲ, ಪರಿಶ್ರಮ, ನಿರ್ದಿಷ್ಟ ಗುರಿ ಅನಿವಾರ್ಯ ಎಂದು ನುಡಿದರು.
ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ಅನಿವಾರ್ಯ. ಓದಿದ್ದನ್ನು ಅರ್ಥ ಮಾಡಿಕೊಂಡು ಬರೆಯುವ ಕೌಶಲ್ಯ ರೂಢಿಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಸರಳವಾಗಿ, ಸ್ಪಷ್ಟವಾಗಿ ವಿವರಿಸುವ, ವಿಶ್ಲೇಷಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಬರವಣಿಗೆ ಕೌಶಲ್ಯ ಕರಗತ ಮಾಡಿಕೊಂಡರೆ ಯಾವುದೇ ಪರೀಕ್ಷೆಯನ್ನೂ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆ ಹೆಸರಿನಲ್ಲಿ ನಾಯಿ ಕೊಡೆಯಂತೆ ಹುಟ್ಟಿಕೊಂಡಿರುವ ತರಬೇತಿ ಕೇಂದ್ರಗಳು ವ್ಯವಹಾರದ ಕೇಂದ್ರಗಳಾಗಿವೆ. ಅವುಗಳ ಮೂಲಕ ವಿದ್ಯಾರ್ಥಿಗಳ ಸುಲಿಗೆ ನಡೆಯುತ್ತಿದೆ.ಇದನ್ನು ತಪ್ಪಿಸಿ ಬಡವರು, ದುರ್ಬಲರಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಲಭಿಸಬೇಕು ಎಂಬ ಉದ್ದೇಶದಿಂದದಾವಣಗೆರೆ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಯೋಜನಾಬದ್ಧ ಅಧ್ಯಯನ ಅನಿವಾರ್ಯ. ನಿಗದಿತ ಕಾಲದಲ್ಲಿ ನಿರ್ದಿಷ್ಟ ಸಾಧನೆ ಮಾಡುವ ಗುರಿ ಇಟ್ಟುಕೊಳ್ಳಬೇಕು. ಯಾವುದೇ ಅಡ್ಡಿ, ಆತಂಕ, ನಿಂದನೆ ಎದುರಾದರೂ ಹಮ್ಮು, ಬಿಗುಮಾನ ಬಿಟ್ಟು ಕಲಿಯುವ ಆಸಕ್ತಿಯತ್ತ, ಗುರಿ ಸಾಧನೆಯತ್ತ ಗಮನ ಇರಬೇಕು. ಹಿರಿಯರ ಮಾರ್ಗದರ್ಶನವೂ ಅಗತ್ಯ. ಗೆಲ್ಲುª ತುಡಿತದಿಂದ ಅಧ್ಯಯನ ಮಾಡಬೇಕು. ಹಾಗಾದಾಗ ಮಾತ್ರ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಾಧನೆಗೆ, ಸಿದ್ಧಿಗೆ ಬಡತನ ಎಂದಿಗೂ ಅಡ್ಡಿ ಬರುವುದಿಲ್ಲ. ಬಡತನವನ್ನೇ ಮೆಟ್ಟಿಲು ಮಾಡಿಕೊಳ್ಳಬೇಕು. ಯುಪಿಎಸ್‍ಸಿ, ಕೆಪಿಎಸ್‍ಸಿ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳು ಸಾಧನೆಯ ದೃಷ್ಟಿಯಿಂದ ನಿಜವಾದ ಪರೀಕ್ಷೆಗಳು. ಅವುಗಳಲ್ಲಿ ಯಶಸ್ಸು ಪಡೆಯುವುದು ಕಷ್ಟ ಸಾಧ್ಯವಾದರೂ, ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಪರೀಕ್ಷೆಗಳು ಹಾಗೆ, ಹೀಗೆ ಎನ್ನುವ ಕಟ್ಟು ಕತೆಗಳನ್ನು ಬಿಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಾಧಕರಿಂದ ಸ್ಪೂರ್ತಿಯನ್ನೂ ಪಡೆಯಬೇಕು ಎಂದು ಸಲಹೆ ನೀಡಿದರು.

ಪರೀಕ್ಷಾ ಪೂರ್ವಸಿದ್ಧತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಮನಸ್ಸು ಮತ್ತು ಹೃದಯವನ್ನು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಮೀಸಲಿಡಬೇಕು. ಹಲವು ವಿಭಿನ್ನ ಸ್ಪರ್ಧೆಗಳನ್ನು ಎದುರಿಸುವ ಬದಲಾಗಿ ಒಂದೇ ಉದ್ದೇಶಿತ ಗುರಿಯೊಂದಿಗೆ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಬೇಕು. ಅಲ್ಲದೆ ಸಾಧಿಸುವ ಕಿಚ್ಚು ಮನಸ್ಸಿನಲ್ಲಿದ್ದರೆ ಯಶಸ್ಸು ನಿಶ್ಚಿತ ಎಂದು ತಿಳಿಸಿದರು.

ಪರೀಕ್ಷೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಗೆ ಅಗತ್ಯವಿರುವ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನವೂ ಮುಖ್ಯ. ಪ್ರತಿದಿನವೂ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪದವಿಯ ಸಾಧನೆಗಿಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳು ಮುಖ್ಯ. ಸಕಾಲಿಕ ತರಬೇತಿ, ಮಾರ್ಗದರ್ಶನದೊಂದಿಗೆ ಪರೀಕ್ಷೆ ಎದುರಿಸಲು ಸಜ್ಜಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಹಲಸೆ ಮಾತನಾಡಿ, ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಅದಕ್ಕಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಎರಡು ವರ್ಷಗಳ ಹಿಂದಿನ ಕನಸು ಇದೀಗ ನನಸಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಹಲವು ವಿಷಯಗಳಲ್ಲಿ ಪರಿಣತಿ ಪಡೆದಿದ್ದಾರೆ. ಅವರ ಮಾರ್ಗದರ್ಶನ, ತರಬೇತಿಯೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮತ್ತು ಸ್ಪರ್ಧೆ ಎದುರಿಸಲು ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಲಸಚಿವ ಪ್ರೊ.ಬಸವರಾಜ ಬಣಕಾರ, ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಯಶಸ್ಸು ಸಾಧಿಸಿದರೆ ತಮ್ಮ ಪ್ರಯತ್ನ ಸಾರ್ಥಕವಾಗಲಿದೆ ಎಂದು ನುಡಿದರು.

ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ.ಅಡವಿರಾವ್, ಸಿಂಡಿಕೇಟ್ ಸದಸ್ಯರಾದ ಜಯಪ್ರಕಾಶ್ ಕೊಂಡಜ್ಜಿ, ಶಶಿಧರ್ ಬಿ.ಎನ್. ಪ್ರೊ.ಯು.ಎಸ್. ಮಹಾಬಳೇಶ್ವರ, ಡಾ.ಈಶ್ವರಪ್ಪ, ಡಾ.ರವಿ ಪಾಟೀಲ, ಡಾ. ಪ್ರಸನ್ನಕುಮಾರ್, ಡಾ.ಶಿವಕುಮಾರ ಕಣಸೋಗಿ, ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top