ಡಿವಿಜಿ ಸುದ್ದಿ, ಕಲಬುರಗಿ: ವಿದ್ಯುತ್ ತಗುಲಿದ್ದ ಹಸುವಿನ ಪ್ರಾಣ ರಕ್ಷಿಸಲು ಹೋಗಿದ್ದ ಬಾಲಕ ಬಲಿಯಾಗಿರುವ ಆಘಾತಕಾರಿ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ಬಾಲಕ ಬೀರಣ್ಣ (15) ಎಂದು ಗುರುತಿಸಲಾಗಿದೆ. ಹಸು ಮೇಯಿಸಲು ಕಾರ್ಖಾನೆ ಕಾಂಪೌಂಡ್ ಬಳಿ ತೆರಳಿದ್ದ. ಈ ವೇಳೆ ಕಾಂಪೌಂಡ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಹಸು ತುಳಿದಿದೆ. ಇದನ್ನು ಕಂಡ ಬಾಲಕ, ತಕ್ಷಣ ಹಸುವನ್ನು ರಕ್ಷಿಸಲು ಹೋಗಿದ್ದಾನೆ. ಆಗ ಬಾಲಕನಿಗೂ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾನೆ. ವಿದ್ಯುತ್ ಶಾಕ್ ಗೆ 15 ವರ್ಷದ ಬಾಲಕ ಮತ್ತು ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಹಾಗೂ ಸ್ಥಳೀಯರು ಜೆಸ್ಕಾಂ ನಿರ್ಲಕ್ಷ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.



