ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ರಾಜ್ಯದಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಇಂದು ಕೂಡ 10 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.
ಮೈಸೂರು 5, ಬೆಂಗಳೂರು 2, ಬೆಂಗಳೂರು ಗ್ರಾಮಾಂತರ 2 ಮತ್ತು ಕಲಬುರಗಿಯಲ್ಲಿ 1 ಕೊರೊನಾ ಪ್ರಕರಣ ಪತ್ತೆಯಾಗಿದೆ. ಮೈಸೂರಿನಲ್ಲಿ ತಂದೆಯಿಂದ 8 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರು ಗ್ರಾಮಾಂತರದ 11 ವರ್ಷದ ಬಾಲಕಿಗೂ ಕೊರೊನಾ ತಗುಲಿದೆ. ಈ ಬಾಲಕಿ ರೋಗಿ ನಂಬರ್ 206ರ ಪುತ್ರಿಯಾಗಿದ್ದಾಳೆ.
ಗುರುವಾರ ಬಾಗಲಕೋಟೆಯ ಮೂರು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿತ್ತು. ಕೊರೊನಾ ವೈರಸ್ ತಡೆಗಾಗಿ ಸರ್ಕಾರ ಸಹ ಸೀಲ್‍ಡೌನ್ ಗೆ ಮುಂದಾಗುತ್ತಿದ್ದು, ಸೋಂಕಿತ ಪ್ರದೇಶಗಳ ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಲಾಗುತ್ತಿದೆ.



