ಡಿವಿಜಿ ಸುದ್ದಿ, ಮಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯಿಂದ ಒಂದು ವಾರ ಘೋಷಿಸಿದ್ದ ಕರ್ನಾಟಕ ಬಂದ್, ಮುಂದುವರಿಯುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 10 ಕೋವಿಡ್ -19 ಪ್ರಕರಣ ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೋಂಕಿನ ಭೀತಿ ಇರುವುದರಿಂದ ಶಾಲಾ, ಕಾಲೇಜುಗಳು, ಮಾಲ್ ಗಳಿಗೆ ಘೋಷಿಸಿರುವ ರಜೆ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸೋಂಕು ಹರಡದಂತೆ ತಡೆಯಲು ಜನರು ಮನೆಯಲ್ಲೇ ಉಳಿಯುವುದು ಅಗತ್ಯ. ಈ ಕಾರಣದಿಂದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾಲ್ ಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ಕಂಡುಬಂದಲ್ಲಿ ರಜೆ ಮತ್ತು ಬಂದ್ ಮುಂದುವರಿಸಲಾಗುವುದು ಎಂದರು.



