Connect with us

Dvgsuddi Kannada | online news portal | Kannada news online

ಕೊರೊನಾ ನಿಯಂತ್ರಣದಲ್ಲಿ ದಾವಣಗೆರೆ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ : ಎಸ್.ಆರ್.ಉಮಾಶಂಕರ

ಪ್ರಮುಖ ಸುದ್ದಿ

ಕೊರೊನಾ ನಿಯಂತ್ರಣದಲ್ಲಿ ದಾವಣಗೆರೆ ಜಿಲ್ಲಾಡಳಿತ ಕಾರ್ಯ ಶ್ಲಾಘನೀಯ : ಎಸ್.ಆರ್.ಉಮಾಶಂಕರ

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣ ಹಾಗೂ ಲಾಕ್‍ಡೌನ್ ಅಗತ್ಯವಸ್ತುಗಳ ಲಭ್ಯತೆ ಸೇರಿದಂತೆ ಜನಜೀವನ ಸುಗಮವಾಗಿ ನಡೆಯಲು ಆರಂಭದಿಂದಲೂ ಪರಿಣಾಮಕಾರಿಯಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಕಾರ್ಯ ರಾಜ್ಯಕ್ಕೆ ಮಾದರಿಯಾಗಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಬಾರದಿರಲಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಸ್.ಆರ್.ಉಮಾಶಂಕರ್ ಆಶಿಸಿದರು.

ಜಿಲ್ಲಾಡಳಿತ ಭವನದಲ್ಲಿ ಕೋವಿಡ್ 19 ವೈರಾಣು ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ಹಿಂದೆ ಆರ್‍ಓ ಪ್ಲಾಂಟ್ ಬಂದಾಗಿನಿಂದ ವೈದ್ಯರಿಗೆ ಕೆಲಸ . ಇದೇ ರೀತಿ ಕೋವಿಡ್ ನಿಯಂತ್ರಣ ಯಶಸ್ವಿಯಾದಲ್ಲಿ ಜಿಲ್ಲೆಯ ವೈದ್ಯರ ಮೇಲಿನ ಒತ್ತಡ ಕಡಿಮೆಯಾಗಿ, ಅವರ ಸೇವೆಯನ್ನು ಇತರೆ ಜಿಲ್ಲೆಗಳಲ್ಲಿ ಬಳಸಿಕೊಳ್ಳಬಹುದೆಂದರು.

ಪ್ರಸ್ತುತ ಜಿಲ್ಲೆಯಲ್ಲಿರುವ 3 ಪಾಸಿಟಿವ್ ಪ್ರಕರಣಗಳ ಸೋಂಕಿತರು ಚಿಕಿತ್ಸೆಗೆ ಉತ್ತಮವಾಗಿ , ಚಿಕಿತ್ಸಾ ಅವಧಿಯಲ್ಲಿಯಲ್ಲಿನ ಪ್ರಾಥಮಿಕ ಹಂತದ ಗಂಟಲು ಮಾದರಿ ಪರೀಕ್ಷೆಯಲ್ಲಿ ಈ ಮೂವರು ಸೋಂಕಿತರ ಫಲಿತಾಂಶ ನೆಗೆಟಿವ್ ಎಂದು ಬಂದಿರುವುದು ಸಂತಸದ ವಿಷಯವಾಗಿದ್ದು ಮುಂದೆ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ವರದಿಯಾಗುವುದು ಬೇಡವೆಂದು ಹೇಳಿದರು.

ಜಿಲ್ಲೆಯಲ್ಲಿ ಎಪಿಸೆಂಟರ್, ಬಫರ್ ಡಿಎಸ್‍ಇನ್ಫೆಕ್ಷನ್ ಕಾರ್ಯ ಉತ್ತಮವಾಗಿ ಕೈಗೊಳ್ಳಲಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕು. ಎಲ್ಲ ಅಗತ್ಯ ಸಾಮಗ್ರಿಗಳ ಜೊತೆಗೆ ಮಾನವ ಸಂಪನ್ಮೂಲವನ್ನು ಸಿದ್ದವಿರಿಸಿಕೊಳ್ಳಬೇಕು. ಹಾಗೂ ಕೋವಿಡ್ ಸ್ಕ್ರೀನಿಂಗ್‍ಗೆ ಆಯುಷ್ ವೈದ್ಯರಿಗೆ ತರಬೇತಿ ನೀಡಿ ಬಳಸಿಕೊಳ್ಳಬಹುದು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿದ್ದ 3 ಕೊರೊನಾ ಪಾಸಿಟಿವ್ ಪ್ರಕರಣಗಳ ಗಂಟಲು ದ್ರವ ಮಾದರಿಯನ್ನು ಪ್ರಾಥಮಿಕ ಹಂತದ ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಮೂರು ಸೋಂಕಿತರ ವರದಿ ನೆಗೆಟಿವ್ ಎಂದು ಬಂದಿದೆ. ಮತ್ತೊಮ್ಮೆ ಇವರ ಗಂಟಲು ದ್ರವ ಮಾದರಿಯನ್ನು ಎರಡನೇ ಹಂತದಲ್ಲಿ ಕಳುಹಿಸಲಾಗುವುದು. ಎಪಿಸೆಂಟರ್ ವಲಯದಲ್ಲಿರುವ ಮನೆಗಳಿಗೆ ತೆರಳಿ ಫ್ಲೂ ಟೆಸ್ಟ್ ಮಾಡಲಾಗಿದೆ. ಈ ವಲಯಗಳಲ್ಲಿ ಡಿಸ್‍ಇನ್ಫೆಕ್ಷನ್ ಸೇರಿದಂತೆ ಪ್ರೊಟೊಕಾಲ್ ಪ್ರಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕೆಲಸ ಮಾಡಲಾಗುತ್ತಿದ್ದು ಆರ್‍ಆರ್‍ಟಿ ತಂಡ ಪ್ರತಿದಿನ ಕೋವಿಡ್ ಸರ್ವೆ ಕಾರ್ಯದಲ್ಲಿ ತೊಡಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್ ಮಾತನಾಡಿ ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಪ್ರಸ್ತುತ 70 ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೊಳಿಪಡುವಷ್ಟು ಎಲ್ಲ ರೀತಿಯ ವೈದ್ಯಕೀಯ, ಸಾಮಗ್ರಿಗಳು, ಮಾನವ ಸಂಪನ್ಮೂಲವನ್ನು ಸಿದ್ದವಿಟ್ಟುಕೊಳ್ಳಲಾಗಿದೆ. 12 ಫಿವರ್ ಕ್ಲಿನಿಕ್ ಮಾಡಲಾಗುವುದು. ಪ್ರಸ್ತುತ 10 ನ್ನು ಗುರುತಿಸಲಾಗಿದೆ. ಬಾಪೂಜಿ, ಎಸ್.ಎಸ್. ಆಸ್ಪತ್ರೆ ಮತ್ತು 3 ಖಾಸಗಿ ಆಸ್ಪತ್ರೆ ಸೇರಿದಂತೆ 5 ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಗುರಿತಿಸಲಾಗಿದೆ. 100 ಬೆಡ್‍ಗಳುಳ್ಳ ಐಸಿಯು ಗುರುತಿಸಲಾಗಿದೆ. ಹಾಗೂ ಪ್ರಾಥಮಿಕ ಕಾಂಟಾಕ್ಟ್‍ಗಳನ್ನು ಕ್ವಾರಂಟೈನ್ ಮಾಡಲು ನಗರದಲ್ಲಿ 6 ಲಾಡ್ಜ್ ಮತ್ತು ತಾಲ್ಲೂಕುಗಳಲ್ಲಿ ಒಂದೊಂದು ಲಾಡ್ಜ್‍ಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಸ್ತುವಾರಿ ಕಾರ್ಯದರ್ಶಿಗಳು ಮಾತನಾಡಿ, ಕೋವಿಡ್ ಆಸ್ಪತ್ರೆಗೆ ಅಗತ್ಯವಾದ ಸಲಕರಣೆಗಳನ್ನು ತಮ್ಮ ಹಂತದಲ್ಲೇ ಖರೀದಿಸುವಂತೆ ಡಿಹೆಚ್‍ಓ ಗೆ ತಿಳಿಸಿದ ಅವರು ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಪಾಲ್ಗೊಂಡ ಚನ್ನಗಿರಿಯ 11 ಜನರಿಗೆ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಅವರಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ, ಇತರರಿಗೆ ಸೋಂಕು ಏನಾದರೂ ಹರಡಿರುವ ಬಗ್ಗೆ ವಿಚಾರಿಸಿದರು.

ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ ಪ್ರತಿಕ್ರಿಯಿಸಿ ಈ ಹನ್ನೊಂದು ಜನರು ಫೆ.28 ಕ್ಕೇ ಜಿಲ್ಲೆಗೆ ವಾಪಾಸ್ಸು ಬಂದಿರುವುದರಿಂದ ಇನ್‍ಕ್ಯುಬೇಷನ್ ಅವಧಿ ಮುಗಿದಿದ್ದು ಅವರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೊರೊನಾ ನಿಯಂತ್ರಣ ಹಿನ್ನೆಲೆ ಪ್ರತಿದಿನ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗುತ್ತಿದೆ. ಜಿಲ್ಲಾಡಳಿತ ಕಚೇರಿಯಲ್ಲಿ ವಾರ್ ರೂಂ ಸ್ಥಾಪಿಸಲಾಗಿದೆ. ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ರೈಸ್ ಮಿಲ್, ದಾಲ್ ಮಿಲ್ ಮಾಲೀಕರೊಂದಿಗೆ ಸಭೆ ನಡೆಸಲಾಗಿದ್ದು, ಪ್ರಸ್ತುತ 62 ರೈಸ್‍ಮಿಲ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಟ್ರಾಫಿಕ್ ಸೇರಿದಂತೆ ವೈದ್ಯಕೀಯ ಇತರೆ ವಸ್ತುಗಳ ವ್ಯವಸ್ಥೆ ಮಾಡಲು ಪ್ರಮೋದ್ ನಾಯಕ್ ನೋಡಲ್ ಅಧಿಕಾರಿಯನ್ನು ನೇಮಿಸಿ ಕ್ರಮ ಕೈಗೊಳ್ಳಲಾಗಿದೆ. ಅಲೆಮಾರಿ, ವಲಸೆ ಕಾರ್ಮಿಕರಿಗೆ ಊಟ ಮತ್ತು ಹಾಲು ವಿತರಿಸಲಾಗುತ್ತಿದೆ. 23235 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.
ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳು 24*7 ತೆರೆಯಲು ಕ್ರಮ ವಹಿಸಲಾಗಿದೆ. ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಿಗೆ ಪಡಿತರ ಪೂರೈಕೆ ಮಾಡಲಾಗಿದೆ ಎಂದರು.
ಉಸ್ತುವಾರಿ ಕಾರ್ಯದರ್ಶಿಗಳು ಎಸಿ ಮತ್ತು ತಹಶೀಲ್ದಾರರ ಮೂಲಕ ಸ್ಟ್ಯಾಂಡರ್ಡೈಸ್ಡ್ ವ್ಯವಸ್ಥೆಯಾಗಬೇಕು. ಅಧಿಕ ಬೆಲೆಗೆ ಯಾರೂ ದನಸ-ಧಾನ್ಯ, ಹಣ್ಣು ತರಕಾರಿ ಮಾರಬಾರದಂತೆ ಕ್ರಮ ವಹಿಸಿ ಎಂದರು.
ಎಸ್‍ಪಿ ಹನುಮಂತರಾಯ ಮಾತನಾಡಿ ಅನಗತ್ಯವಾಗಿ ಓಡಾಡುತ್ತಿದ್ದವರ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ 300 ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದರು.
ಔಷಧಗಳನ್ನು ಸಾಗಿಸುತ್ತಿದ್ದ ವಿಆರ್‍ಎಲ್ ಲಾಜಿಸ್ಟಿಕ್ ಬಂದ್ ಆಗಿರುವ ಕಾರಣ ತೊಂದರೆಯಾಗಿದೆ ಎಂದು ಡಿಸಿ ತಿಳಿಸಿದಾಗ, ಉಸ್ತುವಾರಿ ಕಾರ್ಯದರ್ಶಿಗಳು ಈ ಕುರಿತು ಸಾರಿಗೆ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಆದಷ್ಟು ಹತ್ತಿರದ ಪ್ರದೇಶಗಳಿಂದ ಔಷದಿ ತರಿಸಿಕೊಳ್ಳಿರಿ ಎಂದರು.
ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಬೆಂಗಳೂರು ಮತ್ತು ಇತರೆ ಪ್ರದೇಶಗಳಿಗೆ ಗ್ರಾಮೀಣ ಭಾಗಕ್ಕೆ ಒಟ್ಟು 15600 ಜನರು ಬಂದಿದ್ದು ಕೊರೊನಾ ಹಿನ್ನೆಲೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿಗಳಿಗೆ, ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ವಹಿಸಿದ್ದು, ತಳ್ಳು ಗಾಡಿಗಳ ಮೂಲಕ ತರಕಾರಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. 1520 ಶಾಲೆಗಳ 15235 ಮಕ್ಕಳ ಪೈಕಿ 11300 ಮಕ್ಕಳಿಗೆ 21 ದಿಗನಳ ಪಡಿತರ ಹಾಗೂ ಅಂಗನವಾಡಿ ಮಕ್ಕಳಿಗೆ ಪಡಿತರ ತಲುಪಿಸಲಾಗಿದೆ ಎಂದರು.
ಡಿಸಿ ಮಾತನಾಡಿ ಮಂಡಕ್ಕಿ ಭಟ್ಟಿ ಆರಂಭಿಸಲು ಆದೇಶಿಸಲಾಗಿದೆ. ಅವಲಕ್ಕಿ ಭಟ್ಟಿ ಆರಂಭವಾಗಿದ್ದು ಎಲ್ಲಾ ಆಹಾರ ತಯಾರಿಕಾ ಕೈಗಾರಿಕೆಗಳನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
104 ಸಹಾಯವಾಣಿ ಮೂಲಕ 30 ದೂರುಗಳು ಬಂದಿದ್ದು, ಅವುಗಳನ್ನು ಎಫ್‍ಎಸ್‍ಟಿ ತಂಡ ನಿರ್ವಹಣೆ ಮಾಡಿದೆ. ವಾರ್ ರೂಂ ಗೆ ಸ್ಥಳೀಯವಾಗಿ 8 ದೂರುಗಳು ಬಂದಿದ್ದು, ಪ್ರಮುಖವಾಗಿ ಜನರು ರಸ್ತೆಯಲ್ಲಿ ಓಡಾಡುವ ಹಾಗೂ ಹೋಂ ಕ್ವಾರಂಟೈನ್ ಓಡಾಟದ ಬಗ್ಗೆ ಆಗಿದ್ದು ಇವುಗಳನ್ನು ಅಟೆಂಡ್ ಮಾಡಲಾಗಿದೆ ಎಂದರು.
ಒಟ್ಟು 377 ಹೊರ ರಾಜ್ಯದ ಕಾರ್ಮಿಕರು ಮುಖ್ಯವಾಗಿ ಬಿಹಾರ್, ಝಾರ್ಖಂಡ್, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರಪ್ರದೇಶದವರಾಗಿದ್ದು ಇವರಿಗೆಲ್ಲ ಆಹಾರ ನೀಡಲಾಗುತ್ತಿದೆ ಎಂದು ಡಿಸಿ ತಿಳಿಸಿದರು.
ಉಸ್ತುವಾರಿ ಕಾರ್ಯದರ್ಶಿಗಳು ಹಕ್ಕಿಜ್ವರದ ಹಿನ್ನೆಲೆ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟ ಕುರಿತು ಕೇಳಿದ ಪ್ರಶ್ನೆಗೆ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್ ಉತ್ತರಿಸಿ, 2685 ಕೋಳಿಗಳನ್ನು ಕಲ್ಲಿಂಗ್ ಮಾಡಲಾಗಿದೆ. ಬೇಡಿಕೆ ಕುಸಿದ ಕಾರಣ ಫಾರಂ ಮಾಲೀಕರು ಕೋಳಿಗಳನ್ನು ಸ್ವತಃ ಜೀವಂತ ಸಮಾದಿ ಮಾಡಿದರು. ಬನ್ನಿಕೋಡಿನ ಒಂದು ಕಿ.ಮೀ ಸೋಂಕಿತ ವಲಯವನ್ನು ಡಿಸ್‍ಇನ್‍ಫೆಕ್ಟ್ ಮಾಡಲಾಗಿದೆ. ಹಾಗೂ 01 ಕಿ.ಮೀ ವ್ಯಾಪ್ತಿಯ ಸೋಂಕಿತ ವಲಯದಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು 90 ದಿನ ನಿರ್ಬಂಧಿಸಿದ್ದು ಉಳಿದಂತೆ ಜಿಲ್ಲೆಯ ಎಲ್ಲ ಕಡೆ ಮಾರಾಟ ಮಾಡಲಾಗುತ್ತಿದೆ ಎಂದರು.
ಇದಕ್ಕೆ ಉಸ್ತುವಾರಿ ಕಾರ್ಯದರ್ಶಿಗಳು ಪ್ರತಿಕ್ರಿಯಿಸಿ ಕೋಳಿ ಅತ್ಯುತ್ತಮ ಪ್ರೋಟಿನ್ ಆಹಾರ ಆಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರಣ ಕೊರೊನಾಗೆ ಇದು ಒಳ್ಳೆಯ ಆಹಾರ. ಹಾಗಾಗಿ ಸರ್ಕಾರವೇ ಕಡ್ಡಾಯವಾಗಿ ಎಲ್ಲೆಡೆ ಕೋಳಿ ಮತ್ತು ಮೊಟ್ಟೆ ಮಾರಾಟಕ್ಕೆ ಉತ್ತೇಜನ ನೀಡಿದೆ ಎಂದರು.
ಸಭೆಯಲ್ಲಿ ಎಡಿಸಿ ಪೂಜಾರ್ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top