ಡಿವಿಜಿ ಸುದ್ದಿ, ಬೆಂಗಳೂರು: ಐಸೋಲೇಷನ್ ವಾರ್ಡಿನಲ್ಲಿ ಸರಿಯಾಗಿ ಚಿಕಿತ್ಸೆ ಇಲ್ಲದೆ ಆಹಾರ ತ್ಯಜಿಸಿರುವ ಕೆರೆ ಕಾಮೇಗೌಡರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕೆರೆ ಕಾಮೇಗೌಡರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯ ಸರ್ಕಾರ ತುರ್ತು ಅವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತೇನೆ. ಮನ್ ಕಿ ಬಾತ್ ನಲ್ಲಿ ಕೂಡ ಪ್ರಧಾನಿಯವರು ಕೊಂಡಾಡಿದ್ದಾರೆ. ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೊಗಳಿ ಹೊನ್ನಶೂಲಕ್ಕೆ ಏರಿಸಿದರೆ ಸಾಲದು. ಅನಾರೋಗ್ಯದಿಂದ ಅವರು ಸೋತು ಸುಣ್ಣವಾಗಿರುವಾಗ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ವೈದ್ಯಕೀಯ ಸಚಿವ ಸುಧಾಕರ್, ಕಾಮೇಗೌಡರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ವೈದ್ಯಕೀಯ ಕಾಲೇಜಿನ ನಿರ್ದೇಶಕರಿಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಬೇಕೆಂದು ಸೂಚನೆ ನೀಡಿದ್ದೇನೆ. ಇಡೀ ದೇಶಕ್ಕೆ ಸ್ಪೂರ್ತಿಯಾಗಿರುವ ಕಾಮೇಗೌಡರು ಶೀಘ್ರವಾಗಿ ಗುಣಾಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕಾಲು ನೋವಿನಿಂದ ಬಳಲುತ್ತಿದ್ದ ಕಾಮೇಗೌಡರು ಮಳವಳ್ಳಿ ಮತ್ತು ಮಂಡ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿದ್ದು ದೃಢವಾಗಿದ್ದರಿಂದ ಕಾಮೇಗೌಡರನ್ನು ಮಂಡ್ಯದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಕಾಮೇಗೌಡರ ಇಬ್ಬರು ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.



