ಡಿವಿಜಿ ಸುದ್ದಿ , ದಾವಣಗೆರೆ: ನಗರದ ಮೈಸೂರು ಸಿಲ್ಕ್ ಮಳಿಗೆ ಸ್ಥಗಿತಗೊಳಿಸಿದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಹದಡಿ ರಸ್ತೆಯ ಮಹಾನಗರ ಪಾಲಿಕೆಯ ವಾಟರ್ ಟ್ಯಾಂಕ್ ಮಳಿಗೆ ಸಂಕೀರ್ಣದ ಮೈಸೂರು ಸಿಲ್ಕ್ ಮಳಿಗೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಮಹಾನಗರದ ಹೃದಯ ಭಾಗವಾದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಮೈಸೂರು ಸೀಲ್ಕ್ ಶೋರೂಂನಲ್ಲಿ ದಾವಣಗೆರೆ ಜನರು ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗದವರು ರೇಷ್ಮೆ ಸೀರೆ ಖರೀದಿಸುತ್ತಿದ್ದಾರೆ. ಆದರೆ, ನಿಗಮವು ಏಕಾಏಕಿ ತೆರವುಗೊಳಿಸಿದರೆ ದಾವಣಗೆರೆ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನರಿಗೆ ತೊಂದರೆ ಆಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕೆಎಸ್‍ಐಸಿ ಅಂದಿನ ಅಧ್ಯಕ್ಷ ಡಿ.ಬಸವರಾಜ್ ಅವರ ಮುತುವರ್ಜಿಯಿಂದ ಮಧ್ಯಕರ್ನಾಟಕ ದಾವಣಗೆರೆಯಲ್ಲಿ ಮೈಸೂರು ಸೀಲ್ಕ್ ಶೋರೂಂನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಕೊಡುಗೆಯಾಗಿ ನೀಡಿದರು ಎಂದರು.
ದಾವಣಗೆರೆ ಕೆ.ಎಸ್.ಐ.ಸಿ. ಮಾರಾಟ ಮಳಿಗೆಯನ್ನು ನಂಬಿಕೊಂಡು ನೂರಾರು ನೌಕರರು ಕಂತಿನ ಮೂಲಕ ಹಾಗೂ ಸ್ಕೀಂನ ಮೂಲಕ ಸೀರೆಗಳನ್ನು ಖರೀದಿಸಿದ್ದು, ಅವರಿಗೆ ಅನಾನುಕೂಲವಾಗಲಿದೆ. ಮಾರಾಟ ಮಳಿಗೆ ಎತ್ತಂಗಡಿಯನ್ನು ಸರ್ಕಾರ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಕೆ.ಎಸ್.ಐ.ಸಿ. ಮಾಜಿ ಅಧ್ಯಕ್ಷ ಡಿ. ಬಸವರಾಜ್ ಮಾತನಾಡಿ, ದಾವಣಗೆರೆ ನಗರಕ್ಕೆ ಮೈಸೂರು ಸೀಲ್ಕ್ ಮಾರಾಟ ಮಳಿಗೆಯ ಅಗತ್ಯತೆ ಇದೆ ಎಂದು ಮನಗಂಡು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರದಿಂದ ನಗರದಲ್ಲಿ ಮೈಸೂರು ಸೀಲ್ಕ್ ಶೋರೂಂ ಪ್ರಾರಂಭಿಸಲಾಗಿತ್ತು. ಆದರೆ, ಇದೀಗ ಇದ್ದಕ್ಕಿದ್ದಂತೆ ಮೈಸೂರು ಸೀಲ್ಕ್ ದಾವಣಗೆರೆ ಮಾರಾಟ ಮಳಿಗೆಯನ್ನು ಎತ್ತಂಗಡಿ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ ಬಿಜೆಪಿ ಸರ್ಕಾರ ದಾವಣಗೆರೆ ಏನೂ ಕೊಡುಗೆ ನೀಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ ಮೈಸೂರು ಸೀಲ್ಕ್ ಸೀರೆ ರದ್ದುಪಡಿಸಿರುವುದನ್ನು ಖಂಡನೀಯ. ದಾವಣಗೆರೆಯಲ್ಲಿಯೇ ಮಾರಾಟ ಮಳಿಗೆ ಉಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ದಾವಣಗೆರೆ ದಕ್ಷಿಣ ಅಧ್ಯಕ್ಷೆ ಶುಭಮಂಗಳ, ಸಂಘಟಿತ ಕಾರ್ಮಿಕ ಜಿಲ್ಲಾಧ್ಯಕ್ಷ ನಂಜನಾಯ್ಕ, ರಾಜ್ಯ ಕಾರ್ಯದರ್ಶಿ ಕೆ.ಸಿ. ಲಿಂಗರಾಜ್, ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ. ಎಲ್.ಹರೀಶ್ ಬಸಾಪುರ, ಮಹಿಳಾ ಕಾಂಗ್ರೆಸ್‍ನ ಸುಷ್ಮಾ ಪಾಟೀಲ್, ಆಶಾ ಮುರಳಿ, ದ್ರಾಕ್ಷಾಯಣಮ್ಮ, ರಾಜೇಶ್ವರಿ ಉಮೇಶ್, ಕವಿತಾ ಚಂದ್ರಶೇಖರ್, ಸುನಿತಾ ಭೀಮಣ್ಣ, ಉಮಾಕುಮಾರ್, ಮಾಲತಿ ಬಾಯಿ, ಭಾಗ್ಯ ಪರಶುರಾಮ್, ಗೀತಾ ಚಂದ್ರಶೇಖರ್, ಕಾವೇರಿ, ದಿಲ್‍ಶಾ, ಲಿಯಾಕತ್ ಅಲಿ, ಹರೀಶ ಎಚ್, ರಂಗನಾಥಸ್ವಾಮಿ, ಯುವರಾಜ್, ಆರೋಗ್ಯಸ್ವಾಮಿ, ಕೆ.ಎಂ. ಮಂಜುನಾಥ್, ಸುರೇಶ್, ಅಶ್ರಫ್ ಆಲಿ, ಯೂನಿಸ್ ಅಹಮದ್, ಅಲ್ಲಾವಲಿ ಸಹಜಾಬ್, ಅಲ್ಲಾವಲಿ ಸಮೀರ್ ಮತ್ತಿತರರು ಉಪಸ್ಥಿತರಿದ್ದರು.



