ಡಿವಿಜಿ ಸುದ್ದಿ, ಮಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ವಿಕೋಪಕ್ಕೆ ಹೋಗಿದ್ದರಿಂದ ಮಂಗಳೂರಲ್ಲಿ ಹೇರಲಾಗದ್ದ ಕರ್ಫ್ಯೂ ವನ್ನು ಸೋಮವಾರ ಬೆಳಗ್ಗೆಯಿಂದ ವಾಪಸ್ಸು ಪಡೆಯಲಾಗುವುದು. ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಕುಟುಂಬಗಳಿಗೆ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತು 3 ರಿಂದ 6ಗಂಟೆಯವರೆಗೆ ಕರ್ಫ್ಯೂ ಸಡಿಲಿಸಲಾಗುವುದು. 6ರ ನಂತರ ರಾತ್ರಿಯವರೆಗೆ ಮುಂದುವರಿಸಲಾಗುವುದು. ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಕರ್ಫ್ಯೂ ಇರುವುದಿಲ್ಲ. ರಾತ್ರಿ ಮುಂದುವರಿಯಲಿದ್ದು, ಸೋಮವಾರ ಬೆಳಿಗ್ಗೆಯಿಂದ ಕರ್ಫ್ಯೂ ಇರುವುದಿಲ್ಲ. ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದರು.
ಗೋಲಿಬಾರ್ ಕುರಿತು ತನಿಖೆ
ಪ್ರತಿಭಟನಕಾರರು ಕಾನೂನು ಕೈಗೆತ್ತಿಕೊಂಡಿದ್ದರಿಂದ ಗೋಲಿಬಾರ್ ನಡೆಸಬೇಕಾಯಿತು. ಶಸ್ತ್ರಾಸ್ತ್ರ ದಾಸ್ತಾನು ಕೊಠಡಿಯ ಗೋಡೆ ಹೊಡೆದು ನುಗ್ಗಲು ಯತ್ನಿಸುತ್ತಿದ್ದರಿಂದ ಗೋಲಿಬಾರ್ ಮಾಡಬೇಕಾಯಿತು. ನಮ್ಮ ಸರ್ಕಾರ ದೃಷ್ಟಿಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರೂ ಒಂದೇ, ಎಲ್ಲರ ಏಳಿಗೆಗಾಗಿ ಸರ್ಕಾರ ಶ್ರಮವಹಿಸುತ್ತಿದೆ . ಗೋಲಿಬಾರ್ ಕುರಿತು ತನಿಖೆ ನಡೆಸಲಾಗುವುದು.
ಪ್ರಧಾನಿಯವರ ಸಬ್ ಕಾ ಸಾತ್ , ಸಬ್ ವಿಕಾಸ್ ಎಂಬ ಮಾತಿನಂತೆ ನಡೆಯುತ್ತಿದ್ದೇವೆ ಎಂದರು. ಈ ಸಮಯದಲ್ಲಿ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಕುಟುಂಬದವರ ಜೊತೆ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಮೃತಪಟ್ಟವರ ಕುಟುಂಬಗಳಿಗೆ ಕಾನೂನು ರೀತಿ ಪರಿಶೀಲಿಸಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.



