Connect with us

Dvgsuddi Kannada | online news portal | Kannada news online

ಕೂಡಲಸಂಗಮದ ಅಳಿವು ಉಳಿವು

ಪ್ರಮುಖ ಸುದ್ದಿ

ಕೂಡಲಸಂಗಮದ ಅಳಿವು ಉಳಿವು

ಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯಾ

ಎನ್ನ ಕಾಲೇ ಕಂಬ, ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯಾ!

ಕೂಡಲಸಂಗಮ ದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ !

ಪ್ರತಿಯೊಬ್ಬ ಭಕ್ತನ ದೇಹವನ್ನೆ ದೇವಾಲಯವನ್ನಾಗಿ ಮಾಡ ಬಯಸಿದ್ದ ಬಸವಣ್ಣನವರ ಈ ವಚನದ ಆಶಯಕ್ಕೆ ವಿರುದ್ಧವಾಗಿ ಅವರ ಅನುಯಾಯಿಗಳೆಸಿಕೊಂಡವರೇ ಮುಳುಗುತ್ತಿದ್ದ ಕೂಡಲಸಂಗಮ ದೇವಾಲಯಕ್ಕಾಗಿ ಬಡಿದಾಡಿದ ಪ್ರಸಂಗ 1980ರ ದಶಕದಲ್ಲಿ ಉಂಟಾಗಿತ್ತು. ಈಗ ಕಾಣುವಂತೆ ಬೃಹತ್ ಯೋಜನೆಯನ್ನು ಸರ್ಕಾರ ಆಗ ರೂಪಿಸಿರಲಿಲ್ಲ. ದೇವಾಲಯವನ್ನು ರಕ್ಷಣೆ ಮಾಡಲು ಮಣ್ಣಿನ ತಡೆಗೋಡೆಯನ್ನು ಮಾತ್ರ ನಿರ್ಮಿಸುವ ಯೋಜನೆ ಹಾಕಿತ್ತು. ವಾರದ ಹಿಂದೆ ಬಸವ ಜಯಂತಿಯಂದು ಬಸವನ ಬಾಗೇವಾಡಿಯಲ್ಲಿ ಸರ್ಕಾರ ನಿರ್ಮಿಸಿದ ಬಸವ ಸ್ಮಾರಕ ಭವನದ ಉದ್ಘಾಟನಾ ಸಮಾರಂಭಕ್ಕೆ ಹೋದಾಗ ಹಳೆಯ ಸಿಹಿಕಹಿ ನೆನಪುಗಳು ಮರುಕಳಿಸಿದವು.

ಸಕಲಜೀವಾತ್ಮರಿಗೆ ಲೇಸನ್ನು ಬಯಸಿದ ಬಸವಣ್ಣನವರು ಆರಾಧಿಸಿ ಪೂಜಿಸಿದ ಕೂಡಲ ಸಂಗಮನಾಥನ ದೇವಾಲಯವು ಜನರ ಉಪಯೋಗಕ್ಕೆಂದೇ ನಿರ್ಮಾಣವಾಗುತ್ತಿದ್ದ ಜಲಾಶಯದಿಂದ ಅನಿವಾರ್ಯವಾಗಿ ಮುಳುಗಡೆಯಾಗುವುದನ್ನು ನೋಡಿ ದುಃಖಿತರಾದ ಮುಗ್ದ ಭಕ್ತರನ್ನು ಬಸವಣ್ಣನವರ ತಾತ್ವಿಕ ವಿಚಾರಗಳ ನೆಲೆಗಟ್ಟಿನ ಮೇಲೆ ಸಮಾಧಾನಗೊಳಿಸಿ, ಜನಜಾಗೃತಿಯನ್ನು ಮಾಡುವ ಬದಲು, ರಾಜಕೀಯ ನೇತಾರರು ಮತ್ತು ಸ್ವಾರ್ಥಿ ಮುಖಂಡರು ಮುಗ್ಧ ಜನರ ಭಾವನೆಗಳನ್ನು ಕೆರಳಿಸಿ ಸಮಸ್ಯೆಯನ್ನು ಮತ್ತಷ್ಟು

ಕಗ್ಗಂಟಾಗಿಸಿದ್ದರು. ಆಗ ಮುಳುಗದಂತೆ ನೋಡಿಕೊಳ್ಳಬೇಕಾಗಿದುದ್ದು ಕಣ್ಣಿಗೆ ಕಾಣುವ ‘ಸ್ಥಾವರ ರೂಪವಾದ ದೇವಾಲಯಕ್ಕಿಂತ ಹೆಚ್ಚಾಗಿ ಕಣ್ಣಿಗೆ ಕಾಣಿಸದ ಜಂಗಮ’ ರೂಪವಾದ ಬಸವಣ್ಣನವರ ತತ್ವಸಿದ್ಧಾಂತಗಳನ್ನು ಎಂಬುದು ಅವರಿಗೆ ತಿಳಿಯದಾಗಿತ್ತು. ಹಾಗೆಂದರೆ ಬಸವಣ್ಣನವರ ಬಾಲ್ಯ ಜೀವನದಲ್ಲಿ ಮಹತ್ವ ಪೂರ್ಣವಾದ ತಿರುವನ್ನು ನೀಡಿದ ಈ ದೇವಾಲಯ ಮತ್ತು ಕ್ಷೇತ್ರವನ್ನು ಕಡೆಗಣಿಸಿ ಹಾಗೆಯೇ ಮುಳುಗಲು ಬಿಡಬೇಕಾಗಿತ್ತೆಂದು ಅರ್ಥವಲ್ಲ. ನಮ್ಮ ನಾಡಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸ್ಮಾರಕಗಳನ್ನು ಉಳಿಸಿಕೊಳ್ಳುವುದು ಅಷ್ಟೇ ಮಹತ್ವಪೂರ್ಣ ಹಾಗೂ ಅತ್ಯವಶ್ಯಕವೆಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಿಂತ ಪುರಾತನವಾದ, ಹೆಚ್ಚು ಭವ್ಯವಾದ ದೇವಾಲಯಗಳು ಮತ್ತು ಸ್ಮಾರಕಗಳು ತಮಗೆ ತಾವೇ ಬಿದ್ದುಹೋಗಿವೆ , ಇನ್ನೂ ಬಿದ್ದುಹೋಗುತ್ತಲಿವೆ. ಅವುಗಳನ್ನು ಪುರಾತತ್ವ ಇಲಾಖೆಯವರನ್ನು ಬಿಟ್ಟರೆ ಕೇಳುವವರೇ ಗತಿ ಇಲ್ಲ. ಅವುಗಳ ಕಲೆಯ
ಪರಿವೆಯಾದರೂ ಅದೆಷ್ಟು ಜನರಿಗೆ ಇದೆ ? ಸುಂದರ ಕಲಾಕೃತಿಯ ದೇವಾಲಯದ ಕಂಬಗಳನ್ನು ಕಲ್ಲಿನಿಂದ ಕುಟ್ಟಿ ಹೋಗುವ ಹಿಂದಿನ ‘ಕಲ್ಲುಕುಟಿಕ’ ಪ್ರವಾಸಿಗರಿಗೆ ಶಿಲ್ಪಕಲೆಯ ಭವ್ಯತೆ ಏನು ಗೊತ್ತು ? ತಾವು ಆ ದೇವಾಲಯಕ್ಕೆ ಬಂದುದೇ ಒಂದು ಇತಿಹಾಸವೇನೋ ಎನ್ನುವಂತೆ ಕಂಬಗಳ ಮೇಲೆ ಕಲ್ಲಿನಿಂದ ಕುಟ್ಟಿ ತಮ್ಮ ಆಕರಾಳ ವಿಕಾರಾಳ ಹೆಸರುಗಳನ್ನು ಕೆತ್ತಿ ಕಲಾಕೃತಿಗಳ ಸೌಂದರ್ಯವನ್ನು ಕೆಡಿಸುವ ಈ ಕಿರಾತರಿಗೆ ಹಿಂದಿನ ಕಾಲದವರ ಸೌಂದರ್ಯಪ್ರಜ್ಞೆ ಎಲ್ಲಿಂದ ಬರಬೇಕು? ಕಂಬಗಳನ್ನು ಕಷ್ಟಪಟ್ಟು ತಾವೇ ಕಿತ್ತಿದ್ದರು ಎಲ್ಲಿಯೂ ತಮ್ಮ ಹೆಸರನ್ನು ಕೆತ್ತದೆ ಕಲಾಕೃತಿಗಳ ಮೂಲಕವೇ ಅಮರರಾಗಿರುವ ಅಂದಿನ ಅಜ್ಞಾತ ಶಿಲ್ಪಿಗಳ ಕಲಾರಾಧನೆ ಎಲ್ಲಿ! ಏನೂ ಮಾಡದೆ ಕೈ ಬೀಸಾಡಿಕೊಂಡು ಬಂದು ಈ ಕಲಾಕೃತಿಗಳನ್ನು ಕ್ಷಣಾರ್ಧದಲ್ಲಿ ಕುರೂಪಗೊಳಿಸುವ ಇಂದಿನ ಅಜ್ಞಾನಿ ಪ್ರವಾಸಿಗರ ಅವಿವೇಕದ ಕೆಲಸವೆಲ್ಲಿ! ಅದೇನೇ ಇರಲಿ.ಸಂಗಮೇಶ್ವರ ದೇವಾಲಯಕ್ಕೆ ಬಂದ ಮಹತ್ವ ಬೇಲೂರು, ಹಳೇಬೀಡು ದೇವಾಲಯಗಳಂತೆ ವಾಸ್ತು ಶಿಲ್ಪದ ಕಲಾನೈಪುಣ್ಯತೆಯಿಂದ ಅಲ್ಲ.

ಯುಗಪ್ರವರ್ತಕರನಿಸಿದ ವಿಶ್ವ ವಿಭೂತಿ ಪುರುಷ ಬಸವಣ್ಣನವರು ಇಲ್ಲಿ ಬಾಳಿ ಬೆಳಗಿ ಬಯಲಾದರೆಂಬ ಕಾರಣದಿಂದ. ಬಸವಣ್ಣನವರ ಪೂರ್ವದಲ್ಲಿ ಕನಿಷ್ಠ ಎರಡು ಶತಮಾನಗಳಷ್ಟು ಹಿಂದೆ ಇದ್ದ ಈ ದೇವಾಲಯದೊಂದಿಗೆ ಬಸವಣ್ಣನವರ ಸಂಬಂಧ ಇಲ್ಲದೇ ಹೋಗಿದ್ದರೆ ಪ್ರಾಯಶಃ ಈ ದೇವಾಲಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುತ್ತಿರಲಿಲ್ಲ.

ನಾರಾಯಣಪುರ ಅಣೆಕಟ್ಟು ನಿರ್ಮಾಣದಿಂದ ಈಗಿನ ಬಸವಸಾಗರದ ಜಲಾಶಯದಲ್ಲಿ ಸಂಗಮೇಶ್ವರ ಗುಡಿಯು ಮುಳುಗುವುದೆಂದು ದೊಡ್ಡ ಕೋಲಾಹಲ ನಡೆದಿತ್ತು. ಬಾಲ್ಯದಿಂದಲೂ ನಮ್ಮನ್ನು ಕೂಡಲಸಂಗಮ ಕ್ಷೇತ್ರಕ್ಕೆ ಕರೆದೊಯ್ಯುತ್ತಿದ್ದ ನಮ್ಮ ಪರಮರಾಧ್ಯ ಗುರುವರ್ಯರು ನಮಗೆ ಪಟ್ಟಗಟ್ಟಿದ ಮೇಲೆ ಈ ಕ್ಷೇತ್ರವನ್ನು ಪುನಃ ನೋಡಲು ಹೋಗಿದ್ದು 1980ರ ನವಂಬರ್ ತಿಂಗಳಲ್ಲಿ. ಸಂಗಮೇಶ್ವರ ಗುಡಿಯು ಮುಳುಗಡೆಯಾಗುವ ವಿಚಾರವಾಗಿ ಆಗ ಪತ್ರಿಕೆಗಳಲ್ಲಿ ಸಾಕಷ್ಟು ವಾದ-ವಿವಾದಗಳು, ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಆಲಮಟ್ಟಿಗೆ ಹೋದಾಗ ಕೃಷ್ಣಾ ಮೇಲ್ದಂಡೆ ಯೋಜನೆಯ ಚೀಫ್ ಇಂಜಿನಿಯರ್ ರವರಾದ ಎಚ್. ಎಸ್. ಎಸ್. ಅಯ್ಯಂಗಾರ್ ಅವರ ಭೇಟಿಯಾಯಿತು. ಸಭ್ಯ ಗೃಹಸ್ಥರು. ಸುಸಂಸ್ಕೃತ ವ್ಯಕ್ತಿಗಳು ಆಗಿದ್ದ ಸನ್ಮಾನ್ಯ ಅಯ್ಯಂಗಾರ್ ಅವರು ನಮ್ಮನ್ನು ಭಕ್ತಿ ಗೌರವಗಳಿಂದ ಅವರ ಮನೆಗೆ ಬರಮಾಡಿಕೊಂಡರು.

ಸಂಗಮೇಶ್ವರ ಗುಡಿಯ ಸಂರಕ್ಷಣೆಗೆ ಮಣ್ಣಿನ ಒಡ್ಡನ್ನು ಕಟ್ಟುವ ಸರ್ಕಾರದ ಯೋಜನೆಯ ವಿವರಗಳನ್ನು ನೀಡಿದರು. ಮಾತಿನ ಮಧ್ಯೆ ” ಈ ಮಣ್ಣಿನ ಒಡ್ಡಿನಿಂದ ಗುಡಿಯು ಉಳಿಯಬಲ್ಲುದೇ ? ಪ್ರಾಮಾಣಿಕವಾಗಿ ಹೇಳಿ ” ಎಂದು ಕೇಳಿದ ನಮ್ಮ ಪ್ರಶ್ನೆ ಅಯ್ಯಂಗಾರ್ ಅವರನ್ನು ಕ್ಷಣಕಾಲ ವಿಚಲಿತಗೊಳಿಸಿತು. ಆದರೂ ಬಹಳ ಸಮಾಧಾನದಿಂದಲೇ ಅವರು ಉತ್ತರಿಸಿದರು: “ತಾವು ಧರ್ಮಗುರುಗಳು,ತಮ್ಮ ಎದುರಿಗೆ ನಾನು ಸುಳ್ಳು ಹೇಳಬಾರದು.ನಾನೊಬ್ಬ ಸರ್ಕಾರಿ ನೌಕರ. ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುವುದು ನನ್ನ ಕರ್ತವ್ಯ.
ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಈ ಮಣ್ಣಿನ ಒಡ್ಡಿನಿಂದ ಸಂಗಮೇಶ್ವರ ಗುಡಿಗೆ ತಾತ್ಕಾಲಿಕ ರಕ್ಷಣೆ ದೊರೆಯಬಹುದೇ ಹೊರತು ಶಾಶ್ವತ ಅಪಾಯ ತಪ್ಪಿದ್ದಲ್ಲ. ಇದೇ ಮಾತನ್ನು ಬಹಿರಂಗಸಭೆಯಲ್ಲಿ ಹೇಳಬೇಕೆಂದರೆ ಅದು ನನ್ನಿಂದ ಸಾಧ್ಯವಿಲ್ಲ. ಆಗ ನಾನು ಸರ್ಕಾರದ ಯೋಜನೆಯನ್ನು ಸಮರ್ಥಿಸಿಕೊಂಡೇ ಮಾತನಾಡಬೇಕಾಗುತ್ತದೆ.” ಹಾಗಾದರೆ ಇದಕ್ಕೆ ಪರಿಹಾರವೇನೆಂಬ ನಮ್ಮ ಮರು ಪ್ರಶ್ನೆಗೆ ಅವರು ಕೊಟ್ಟ ಉತ್ತರ: ” ತಾವು ಏನೇ ಬದಲಾವಣೆಯನ್ನು ಬಯಸಿದರು ಇನ್ನೊಂದು ವಾರದೊಳಗೆ ಮುಖ್ಯಮಂತ್ರಿಗಳಿಂದ ಆದೇಶವಾದರೆ ಮಾತ್ರ ಸಾಧ್ಯ. ಈಗಿನ ಯೋಜನೆಯ ಪ್ರಕಾರ ಈಗಾಗಲೇ ಕಂಟ್ರಾಕ್ಟರ್ ಗಳಿಂದ ಟೆಂಡರ್ ಕರೆಯಲಾಗಿದೆ. ಒಮ್ಮೆ ಟೆಂಡರ್ ಒಪ್ಪಿಕೊಂಡ ಮೇಲೆ ಬದಲಾವಣೆ ಮಾಡುವುದು ಕಷ್ಟ” ಎಂದು ಸ್ಪಷ್ಟವಾಗಿ ನುಡಿದರು. ” ಟೆಂಡರ್ ಸ್ವೀಕೃತಿಯನ್ನು ನಿಮ್ಮಿಂದ ಸಾಧ್ಯವಾದಷ್ಟು ವಿಳಂಬ ಮಾಡಿರಿ, ನಮ್ಮ ಪ್ರಯತ್ನ ನಾವು ಮಾಡುತ್ತೇವೆ, ಸಂಗಮನಾಥನ ಇಚ್ಚೆ ಇದ್ದಂತಾಗಲಿ” ಎಂದು ಅಯ್ಯಂಗಾರ್ ಅವರಿಂದ ಬೀಳ್ಕೊಂಡು ಬಾಗಲಕೋಟೆಯ ಚರಂತಿಮಠದ ಶ್ರೀ ಪ್ರಭುಸ್ವಾಮಿಗಳವರು ಆಹ್ವಾನಿಸಿದ್ದ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಲು ನಮ್ಮ ಮುಂದಿನ ಪ್ರಯಾಣ. ಗೋಷ್ಠಿಯನ್ನು ಮುಗಿಸಿಕೊಂಡು ಬಾಗಲಕೋಟೆಯಿಂದ ಹೊರಟು ಯಾವ ಪೂರ್ವಭಾವೀ ಸೂಚನೆಯನ್ನೂ ನೀಡದೆ ಚಿತ್ತರಗಿಯ ಇಳಕಲ್ ಮಹಾಂತಸ್ವಾಮಿಗಳ ಮಠವನ್ನು ತಲುಪಿದಾಗ ಮಧ್ಯರಾತ್ರಿ 1 ಗಂಟೆ. ಮಹಾಂತಸ್ವಾಮಿಗಳು ಮಠದ ಯಾವುದೋ ಕಾರ್ಯಕ್ರಮವನ್ನು ಮುಗಿಸಿಕೊಂಡು ಆಗತಾನೆ ಪವಡಿಸಿದ್ದರು. ನಾವು ಬಂದ ಸುದ್ದಿಯನ್ನು ತಿಳಿದೊಡನೆಯೇ ಆಶ್ಚರ್ಯಚಕಿತರಾಗಿ ಎದ್ದುಬಂದು ತುಂಬಾ ಗೌರವದಿಂದ ಕಂಡರು. ನಮ್ಮ ಅವರ ಮೊಟ್ಟ ಮೊದಲ ಭೇಟಿ. ವಯಸ್ಸಿನಲ್ಲಿ ನಮಗಿಂತ ಹಿರಿಯರಾದರೂ ಅವರು ನಮ್ಮ ಬಗ್ಗೆ ತೋರಿದ ಗೌರವಾದರಗಳು,ಅವರಲ್ಲಿದ್ದ ವಿನೀತ ಸ್ವಭಾವ ನಮ್ಮನ್ನು ಬೆರಗುಗೊಳಿಸಿತು. ಇಂಜಿನಿಯರ್ ಅಯ್ಯಂಗಾರ್ ಅವರೊಡನೆ ನಡೆದ ನಮ್ಮ ಸಂಭಾಷಣೆ ಮತ್ತು ಕೂಡಲಸಂಗಮ ಕ್ಷೇತ್ರವನ್ನು ವಿಶ್ವಾದ್ಯಂತ ಬಸವಣ್ಣನವರ ತತ್ವಗಳಲ್ಲಿ ಆಸಕ್ತಿಯುಳ್ಳ ವಿದ್ವಾಂಸರನ್ನು, ವಿಚಾರವಂತರನ್ನು, ಪ್ರವಾಸಿಗರನ್ನು ಆಕರ್ಷಿಸುವ ಒಂದು ಭವ್ಯಕೇಂದ್ರವನ್ನಾಗಿ ಮಾಡಬೇಕೆಂಬ ನಮ್ಮ ಗುರುಗಳ ಹಂಬಲವನ್ನು ಮುಂದಿಟ್ಟಾಗ ತುಂಬಾ ಸಂತೋಷಪಟ್ಟರು.
” ಈ ಭಾಗದ ಭಕ್ತರನ್ನು ಒಪ್ಪಿಸುವ ಜವಾಬ್ದಾರಿ ನಮಗಿರಲಿ, ತಾವು ಸರ್ಕಾರಕ್ಕೆ ಹತ್ತಿರದಲ್ಲಿದ್ದೀರಿ ಈ ಕಾರ್ಯವನ್ನು ಬೇಗನೆ ಮಾಡಿಸಿರಿ” ಎಂದು ತುಂಬಾ ಪ್ರೋತ್ಸಾಹದಾಯಕವಾದಾ ಮಾತುಗಳನ್ನಾಡಿದರು. ಅವರ ಈ ಸಹೃದಯ ಪ್ರತಿಕ್ರಿಯೆಗೆ ಕೃತಜ್ಞತೆ ಸೂಚಿಸಿ ರಾತ್ರೋರಾತ್ರಿ ಕೂಡಲಸಂಗಮಕ್ಕೆ ಮರುಪ್ರಯಾಣ.

 

ಮರುದಿನ ಪ್ರಾತಃಕಾಲ ಸಂಗಮದಲ್ಲಿ ಮಿಂದು ಜಲಾಶಯದ ನೀರಿನಿಂದ ಆವರಿಸಿ ಮುಂದೆ ಕಾಣದಂತಾಗಲಿದ್ದ ಪ್ರಕೃತಿಯ ಸೊಬಗಿನ ಮಡಿಲಲ್ಲಿದ್ದ ಐಕ್ಯಮಂಟಪದಲ್ಲಿಯೇ ಧ್ಯಾನಮಗ್ನರಾಗಿ ಕುಳಿತು ಮಾಡಿದ ನಮ್ಮ ಲಿಂಗಪೂಜೆ ಎಂದಿನ ಪೂಜೆಯಾಗಿರದೆ ಹೃನ್ಮನಗಳನ್ನು ಅರಳಿಸಿ ಅಲೌಕಿಕ ಆನಂದಾನುಭವದ ಸವಿಯನ್ನು ನೀಡಿದ
ಅವಿಸ್ಮರಣೀಯ ಶಿವಪೂಜೆಯಾಗಿತ್ತು.

ಕೂಡಲಸಂಗಮದಿಂದ ಸಿರಿಗೆರೆಗೆ ಹಿಂದಿರುಗಿದ ಮೇಲೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಗೆಂದು ದಿನಾಂಕ 27.11.1980ರಂದು ” ಕೂಡಲಸಂಗಮ ಕ್ಷೇತ್ರದ ಪುನರುಜ್ಜೀವನ” ಕುರಿತು ಒಂದು ಮನವಿ. ಮಣ್ಣಿನ ಒಡ್ಡಿಗಾಗಿ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುವುದನ್ನು ನಿಲ್ಲಿಸಿ ಅದರ ಬದಲು ಜಲಾಶಯವು ಪೂರ್ಣ ತುಂಬಿದಾಗಲೂ ಮುಳುಗಡೆಯಾಗದ ಮೇಲ್ಭಾಗದಲ್ಲಿ ನೂರಾರು ಎಕರೆ ಜಮೀನನ್ನು ವಶಪಡಿಸಿಕೊಂಡು ಅದರಲ್ಲಿರ ಬಸವಣ್ಣನವರ ಒಂದು ಸ್ಮಾರಕ ಭವನ, ಶಿವಶರಣರ ಸಾಹಿತ್ಯ ಸಂಶೋಧನ ಕೇಂದ್ರ, ಬೃಹದ್ ಗ್ರಂಥಾಲಯ, ಭವ್ಯವಾದ ಸಭಾಂಗಣ, ಶಿಲ್ಪಕಲಾ ದೃಷ್ಟಿಯಿಂದ ಗುಡಿಯ ಬಿಡಿಭಾಗಗಳನ್ನು ಬಿಚ್ಚಿ ಅದೇ ಮಾದರಿಯಲ್ಲಿ ಪುನರ್ ನಿರ್ಮಾಣ ಕಲ್ಯಾಣಮಂಟಪ, ಅತಿಥಿ ಗೃಹಗಳ ನಿರ್ಮಾಣ ಇತ್ಯಾದಿಗಳನ್ನು ಸರ್ಕಾರ ಮಾಡಬೇಕೆಂದು ಆ ಮನವಿಯ ಮುಖ್ಯಾಂಶಗಳು.

ಕಾಲದಪರಿಮಿತಿಯಿದ್ದುದ್ದರಿಂದ ಅನೇಕ ಮಠಾಧಿಪತಿಗಳು, ಪ್ರಮುಖ ಸಾಹಿತಿಗಳು ಮತ್ತು ಚಿಂತನಶೀಲ ಗಣ್ಯವ್ಯಕ್ತಿಗಳಲ್ಲಿಗೆ ಮನವಿಯ ಪರಿ ಪತ್ರದೊಂದಿಗೆ ನಮ್ಮ ಪ್ರತಿನಿಧಿಗಳನ್ನು ಖುದ್ದಾಗಿ ಕಳುಹಿಸಿಕೊಡಲಾಯಿತು. ಕೆಲವರು ತಮ್ಮ ಸಮ್ಮತಿಯನ್ನು ಲಿಖಿತವಾಗಿ ಬರೆದು ಕಳಿಹಿಸಿದರು. ಇನ್ನು ಕೆಲವರು ತಮ್ಮ ಒಪ್ಪಿಗೆ ಇದೆ ಎಂದು ಬಾಯಿಮಾತಿನಲ್ಲಿ ಹೇಳಿ ಕಳುಹಿಸಿದರು.
ಮತ್ತೆ ಕೆಲವರು ತಾವು ಪ್ರತಿನಿಧಿಸುವ ಸಂಘ-ಸಂಸ್ಥೆಗಳ ಮೀಟಿಂಗ್ ಗಳಲ್ಲಿ ಈ ವಿಷಯವನ್ನು ಮಂಡಿಸಿ ಅಧಿಕೃತವಾಗಿ ಗೊತ್ತುವಳಿಯನ್ನು ಅಂಗೀಕರಿಸಿ ಕಳುಹಿಸಿದರು. ವಿಶೇಷವಾಗಿ ಬೆಳಗಾಂ ನಾಗನೂರು ಮಠದ ಲಿಂಗೈಕ್ಯ ಪ್ರಭುಸ್ವಾಮಿಗಳು ಈ ವಿಷಯ ಕುರಿತು ಚರ್ಚಿಸಿ ನಿರ್ಣಯಿಸಲು ಅಲ್ಲಿಯ ಕನ್ನಡ ಮತ್ತು ಮರಾಠಿ ದಿನಪತ್ರಿಕೆಗಳಲ್ಲಿ ಒಂದು ಜಾಹೀರಾತನ್ನೇ ಕೊಟ್ಟು ಸಾರ್ವಜನಿಕ ಸಭೆಯನ್ನು ಸೇರಿಸಿ ಒಮ್ಮತದಿಂದ ಬೆಂಬಲಿಸಿ ಠರಾವು ಪಾಸುಮಾಡಿ ಮಾಡಿ ಕಳುಹಿಸಿದರು.

ಈ ಎಲ್ಲ ಪ್ರತಿಕ್ರಿಯೆಗಳ ಆಧಾರದ ಮೇಲೆ ಸರ್ಕಾರಕ್ಕೆ ಹೋಗಬೇಕೆಂದಿರುವ ನಿಯೋಗದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ನಮ್ಮ ಅಪೇಕ್ಷೆ ವ್ಯಕ್ತಪಡಿಸಿ ಮಾಜಿ ಉಪ ರಾಷ್ಟ್ರಪತಿಗಳಾಗಿದ್ದ ಬಿ.ಡಿ.ಜತ್ತಿಯವರಿಗೆ
ಯವರಿಗೆ ದಿನಾಂಕ 3.12.1980ರಂದು ಪತ್ರ.
ಅದೇ ರೀತಿ ಸರ್ಕಾರದ ಮೇಲೆ ಸತ್ ಪ್ರಭಾವವನ್ನು ಬೀರುವಂತೆ ಅಂದಿನ ಕೇಂದ್ರ ಸಚಿವರಾಗಿದ್ದ ವೀರೇಂದ್ರ ಪಾಟೀಲರಿಗೆ ಪತ್ರ. ಶ್ರೀ ಪಾಟೀಲರು ಆಗಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಆರ್. ಗುಂಡೂರಾವ್ ಅವರಿಗೆ ತಕ್ಷಣವೇ ಪತ್ರ ಬರೆದು ಮನವಿಯ ಹಿನ್ನೆಲೆಯಲ್ಲಿ ಯೋಜನೆಯನ್ನು ಪುನರ್ ರೂಪಿಸುವಂತೆ ಸೂಚಿಸಿದರು. ಶ್ರೀ ಜತ್ತಿಯವರು ಸಹ ಬೆಂಗಳೂರಿನ ಬಸವ ಸಮಿತಿಯ ಆಶ್ರಯದಲ್ಲಿ ಇದಕ್ಕಾಗಿ ಎರಡು ಮೀಟಿಂಗ್ ಗಳನ್ನು ಕರೆದರು.ಈ ಮೀಟಿಂಗ್ ಗಳಲ್ಲಿ ಆಗಿನ ಹೆಸರಾಂತ ಇಂಜಿನಿಯರ್ ಬಾಳೆಕುಂದ್ರಿಯವರು ಇದ್ದು ಸಾಕಷ್ಟು ಚರ್ಚೆ ನಡೆದು ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಾದ ಮನವಿಯನ್ನು ಸಿದ್ಧಪಡಿಸಲಾಯಿತು. ನಿಯೋಗದಲ್ಲಿ ನಮ್ಮನ್ನೂ ಒಳಗೊಂಡಂತೆ ಯಾರು ಯಾರು ಹೋಗಬೇಕೆಂಬ ನಿರ್ಣಯವೂ ಆಯಿತು. ಅಂತಿಮವಾಗಿ 25.12.1980 ರಂದು ಆಗಿನ ಮುಖ್ಯ ಮಂತ್ರಿಗಳಾಗಿದ್ದ ಸನ್ಮಾನ್ಯ ಆರ್. ಗುಂಡೂರಾವ್ ಅವರನ್ನು ನಿಯೋಗವು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿತು.

ಶ್ರೀ ಗುಂಡೂರಾವ್ ಅವರು ಸಾವಧಾನದಿಂದ ಆಲಿಸಿ ಈ ವಿಷಯವಾಗಿ ಸ್ವಲ್ಪವೂ ಮೀನಾಮೇಷ ಎಣಿಸದೆ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿಯೋಗ ಸಲ್ಲಿಸಿದ ಮನವಿ ಪತ್ರದ ಮೇಲೆ ಈ ಕೆಳಕಂಡಂತೆ ಬರೆದು ಹಳೆಯ ಯೋಜನೆಯ ಪ್ರಕಾರ ನಡೆಯಬೇಕಾಗಿದ್ದ ಎಲ್ಲ ಕೆಲಸ ಕಾರ್ಯಗಳನ್ನು ರದ್ದುಗೊಳಿಸಿದರು.

“Secretary, PWD – Many important leaders represented to that the Government should not take any decision without examining in detail. further all action is necessary. All concerned files may be put up to me early and let me discuss in detail.”

ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿಯಾಗಿದ್ದ ಜೆ. ಶ್ರೀನಿವಾಸನ್ ಅವರಿಂದ ಲೋಕೋಪಯೋಗಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿದ್ದಾಗ ಬಿ. ಸುಬ್ಬಯ್ಯ ಅವರಿಗೆ ದಿನಾಂಕ 27.12.1980 ರಂದು ಮುಖ್ಯಮಂತ್ರಿಗಳ ಆದೇಶ ಅಧಿಕೃತವಾಗಿ ರವಾನೆಯಾಯಿತು.

ಮಣ್ಣಿನ ವಡ್ಡಿನ ನಿರ್ಮಾಣ ಕಾರ್ಯವು ನಿಂತೊಡನೆಯೇ ಕೆಲವರು ಇದನ್ನು ರಾಜಕೀಯ ಕಾರಣಗಳಿಗಾಗಿ ಇದು ದುರ್ಲಾಭಮಾಡಿಕೊಳ್ಳಲು ಯತ್ನಿಸಿದರು. ಜನರ ಧಾರ್ಮಿಕ ಭಾವನೆಗಳನ್ನು ತಮ್ಮ ಸ್ವಾರ್ಥಕ್ಕೆ ದುರುಪಯೋಗ ಮಾಡಿಕೊಳ್ಳಲು ಹವಣಿಸಿದರು.ಗುಡಿಯನ್ನು ಕೀಳುವುದಲ್ಲದೆ, ಲಿಂಗವನ್ನು ಕಿತ್ತು ಬೇರೆಡೆ ಒಯ್ಯುತ್ತಾರೆಂದು ಸುಳ್ಳು ಸುಳ್ಳು ವದಂತಿ ಹಬ್ಬಿಸಿದರು.

ಸಿರಿಗೆರೆ ಸ್ವಾಮಿಗಳು ಕೂಡಲಸಂಗಮಕ್ಕೆ ಬಂದರೆ ರಕ್ತದ ಕೋಡಿ ಹರಿಯುತ್ತದೆ ಎಂದು ಬೆದರಿಕೆಯನ್ನು ಹಾಕಿದರು. ಸಿರಿಗೆರೆ ಶ್ರೀಗಳು ಮತ್ತು ಜತ್ತಿಯವರು ಸರ್ಕಾರದ ಹಣವನ್ನು ಲಪಟಾಯಿಸಲು ಯೋಜನೆ ಹಾಕಿದ್ದಾರೆಂದು ಹೀಗಳೆದರು. ಸಿರಿಗೆರೆ ಮಠದವರು ಈ ಕ್ಷೇತ್ರವನ್ನು ತಮ್ಮ ಕೈವಶ ಮಾಡಿಕೊಳ್ಳಲು ಹೊರಟಿದ್ದಾರೆಂದು ಹುಯಿಲೆಬ್ಬಿಸಿದ್ದರು. ಅಂಥವರಿಗೆ ನಮ್ಮ ಲಿಂಗೈಕ್ಯಶ ಗುರುವರ್ಯರು ಕೊಟ್ಟ ಮಾರ್ಮಿಕ ಉತ್ತರ ” ಸಿರಿಗೆರೆ ಮಠದವರು ಕೂಡಲಸಂಗಮ ಕ್ಷೇತ್ರವನ್ನು ಕಬಳಿಸಲು ಅದೇನು ಶಿಷ್ಯರ ಮನೆಯ ಹೋಳಿಗೆಯೇ, ಹುಗ್ಗಿಯೇ? ”

– ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು
ಸಿರಿಗೆರೆ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top