ಡಿವಿಜಿ ಸುದ್ದಿ, ನ್ಯಾಮತಿ: ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಮರಳಿನ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದಿವ್ಯಾ ಪಾಟೀಲ್(15) ಸಾವನ್ನಪ್ಪಿದ ಬಾಲಕಿಯಾಗಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ10ನೇ ತರಗತಿ ಓದುತ್ತಿದ್ದಳು. ಇಂದು ಬೆಳಗ್ಗೆ ದಿವ್ಯಾ ಶಾಲೆಗೆ ಸೈಕಲಿನಲ್ಲಿ ತೆರಳುತ್ತಿದ್ದಳು. ಈ ವೇಳೆ ತುಂಗಭದ್ರ ನದಿಯಿಂದ ಮರಳು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿ ದಿವ್ಯಾ ಮೇಲೆ ಹರಿದ ಪರಿಣಾಮ ದಿವ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿ ಮೃತಪಡುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಆಕ್ರೋಶಗೊಂಡ ಗ್ರಾಮಸ್ಥರು ಲಾರಿಗೆ ಬೆಂಕಿ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಂಗಾಭದ್ರ ನದಿಯಿಂದ ಮರಳು ತುಂಬಿದ ಲಾರಿಗಳ ಪ್ರತಿ ದಿನದ ಸಂಚಾರಿಸುತ್ತಿವೆ. ಬೈಕ್, ಸೈಕಲ್ ನಲ್ಲಿ ಓಡಾಡುವುದು ತುಂಬಾ ಕಷ್ಟವಾಗಿದೆ. ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದರು. ಇದರಿಂದ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.



