ಬೆಂಗಳೂರು: ಎಲ್ಲರಿಗೆ ಮರಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಮರಳು ನೀತಿ ಶೀಘ್ರದಲ್ಲಿ ಜಾರಿಗೆ ತರಲಾಗುವುದು ಎಂದು ಗಣಿ ಹಾಗೂ ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ವಿಕಾಸಸೌಧದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹಳ್ಳ, ಕೊಳ್ಳಗಳಲ್ಲಿ ಸಿಗುವ ಉಸುಕು ಬಳಕೆಗೆ ಅವಕಾಶ ಮಾಡಿಕೊಡಲಾಗುವುದು. ಎತ್ತಿನಗಾಡಿ, ಟ್ರ್ಯಾಕ್ಟರ್ʼಗಳಲ್ಲಿ ಮರಳು ತರಲು ಅವಕಾಶ ನೀಡಲಾಗುವುದು. ಇದುವರೆಗೆ ಎಲ್ಲದಕ್ಕೂ ನಿರ್ಬಂಧ ಹೇರಲಾಗಿತ್ತು.
ಇದು ಸಣ್ಣ ರೈತರು, ಜನಸಾಮಾನ್ಯರಿಗೆ ತೊಂದರೆಯಾಗಿತ್ತು. ಮರಳು ಗಣಿಗಾರಿಕೆ ನಿಯಮಗಳನ್ನ ಸರಳಗೊಳಿಸುವ ಮೂಲಕ ಇನ್ಮುಂದೆ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೇವೆ. ಹೊಸ ಮರಳು ನೀತಿ ಶೀಘ್ರದಲ್ಲೇ ಜಾರಿಗೆ ತರುತ್ತೇವೆ. ಪ್ರಸ್ತುತ ಮೂರು ಕಮಿಟಿ ರಚಿಸಿದ್ದೇವೆ, ಆಂಧ್ರಕ್ಕೆ ಇಂದು ಒಂದು ಕಮಿಟಿ ಹೋಗಿದ್ದು ಅಲ್ಲಿನ ನೀತಿಯ ಬಗ್ಗೆ ಅಧ್ಯಯನ ಮಾಡಲಿದೆ ಹಾಗೂ ಈ ಬಗ್ಗೆ ವರದಿ ನೀಡಲಿದೆ ಎಂದು ತಿಳಿಸಿದರು



