ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪುನರಾಯ್ಕೆ ಬಯಸಿ ಹಾಲಿ ಅಧ್ಯಕ್ಷ, ಶಾಸಕ ಹಾಗೂ ಸಮಾಜದ ಹಿರಿಯರಾದ ಡಾ. ಶಾಮನೂರು ಶಿವಶಂಕರಪ್ಪ ಬೆಂಗಳೂರಿನಲ್ಲಿ ಮಹಾಸಭಾದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮಹಾಸಭಾದ ಮುಖ್ಯ ಚುನಾವಣಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ. ದ್ಯಾಬೇರಿ ಅವರಿಗೆ ನಾಮಪತ್ರ ಸಲ್ಲಿಸಿದರು. ಮಹಾಸಭಾದ ರಾಜ್ಯ ಘಟಕದ ನೂತನ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ, ಚುನಾಯಿತ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಬಿ.ಎಸ್.ಸಚ್ಚಿದಾ ನಂದಮೂರ್ತಿ, ಎಚ್.ಎಂ.ರೇಣುಕ ಪ್ರಸನ್ನ, ಚಿದಾನಂದ ಎಸ್.ಮಠದ, ಕೋರಿ ವಿರುಪಾಕ್ಷಪ್ಪ, ಗಂಗಮ್ಮ ಬಸವರಾಜು, ಚಂದ್ರಕಲಾ ಶ್ರೀಕಂಠಾರಾಧ್ಯ, ರೂಪಶೇಖರ, ಶಂಭು ಉರೇಕೊಂಡಿ, ಬಿ.ಜಿ.ರಮೇಶ, ಡೋಲಿ ಚಂದ್ರು, ಸಮಿತಿ ಸದಸ್ಯರು, ಸೂಚಕರು, ಅನುಮೋದಕರು, ಇತರರು ಇದ್ದರು.
ಮಹಾಸಭಾಗೆ ನಾಮಪತ್ರಗಳನ್ನು ಸಲ್ಲಿಸಲು ಸೆ.11 ಅಂತಿಮ ದಿನವಾಗಿದೆ. ಸೆ.12 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಸೆ.15ರಂದು ನಾಮಪತ್ರ ಹಿಂಪಡೆಯಲು ಅವಕಾಶ ಇದೆ. ಅಗತ್ಯವಿದ್ದಲ್ಲಿ ಸೆ.29ರಂದು ಚುನಾವಣೆ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಉಪ ಚುನಾವಣಾಧಿಕಾರಿ, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಸಿ.ಎಸ್.ವೀರೇಶ ತಿಳಿಸಿದ್ದಾರೆ.



