ನೀನಯ್ಯ
ಮಾಡುವ ಕಾಯಕವಷ್ಟೇ ನಮ್ಮದಯ್ಯ
ಮಾಡಿದಷ್ಟು ನೀಡುವ ಭಿಕ್ಷೆ ನಿನ್ನದಯ್ಯ
ಮಾಡದೇ ಬೇಡಿದರೆ ನೀಡದಿರಯ್ಯ
ದುಡಿಯುವ ಕೂಲಿಯೂ ನಾವಯ್ಯ
ಮಾಡಿಸುವ ಮಾಲಿಯು ನೀನಯ್ಯ
ಶ್ರೀ ತರಳಬಾಳು ಸದ್ಗುರುವೇ ಕೇಳಯ್ಯ.
ಹುಂಬರ
ಉಚ್ಛರು ತಾವುಗಳೆಂಬ
ಹುಚ್ಚು ಭ್ರಮೆಯಲ್ಲಿರುವ
ತುಚ್ಚ ಮನದ ಹುಂಬರನು
ಮೆಚ್ಚಲಾರರು ನೋಡಯ್ಯ
ಶ್ರೀ ತರಳಬಾಳು ಸದ್ಗುರುವು.
ನಾಲಿಗೆ
ಹರಿತವಾಗಿರುವ ಚೂರಿಗಿಂತಲೂ
ಹರಿಬಿಡುವ ಎಲುಬಿಲ್ಲದ ನಾಲಿಗೆಗೆ
ನರರು ಅಂಜಿ ನಡೆಯದಿದ್ದರಯ್ಯ
ನರರ ಬಾಳೆಂಬುದು ನರಕವಯ್ಯ
ಹರರೂಪಿ ಶ್ರೀ ತರಳಬಾಳು ಸದ್ಗುರುವೇ
ಅರೆಕ್ಷಣಕ್ಕೊಮ್ಮೆ ನಿಮ್ಮ ನೆನೆಯುವಂತೆ
ನರರ ನಾಲಿಗೆಯಿರಿಸಿ ಉದ್ಧರಿಸಯ್ಯ.
ಮಿತಿಮೀರಿ
ಇತಿಮಿತಿಯನರಿಯದೇ
ಮತಿಭ್ರಮೆಗೊಂಡವರಂತೆ
ಮಿತಿಮೀರಿ ವರ್ತಿಸಿದರೆ
ಪತಿತಪಾವನ ಮೃಡರೂಪಿ
ಶ್ರೀ ತರಳಬಾಳು ಸದ್ಗುರುವಿನ
ಕೃಪೆಯು ದೊರೆಯಲಾರದಯ್ಯ.
ದವಸವ
ಜೀವನವೆಂಬ ಒರಳಿನ ಕಲ್ಲಿನಲಿ
ಅನುಭವದ ಒನಕೆಯ್ಹಿಡಿದುಕೊಂಡು
ಶ್ರೀ ತರಳಬಾಳು ಸದ್ಗುರುವ ನೆನೆದು
ನೋವು ನಲಿವುಗಳ ದವಸವ ಕುಟ್ಟುತ
ಬಾಳನು ಹದಗೊಳಿಸುವವರೇ ಶರಣರು.
ಏನು?
ಸದ್ವಿಚಾರಗಳರಿಯದೇ
ವೇದಗಳೋದಿದರೇನು?
ಸದ್ಭಾವನೆಯ ಹೊಂದದೇ
ಪಾದಪೂಜೆಯ ಮಾಡಿದರೇನು?
ಚಿತ್ತಶುದ್ಧಿಯು ಇಲ್ಲದೇ
ಪಾದೋದಕ ಸೇವಿಸಿದರೇನು?
ಸಹಬಾಳ್ವೆಯ ಪಾಠ ಕಲಿಯದೇ
ಮಹಾದೇವನ ಭಜಿಸಿದರೇನು?
ಶಿವಶರಣರ ತತ್ತ್ವಗಳ ಪಾಲಿಸದೇ
ಶ್ರೀ ತರಳಬಾಳು ಸದ್ಗುರುವ ಶಿಷ್ಯರಾದರೇನು?.
ಬಾಳು
ಅವನಿಯೊಳಗೆ ಬಿತ್ತಿದ
ಬೀಜ ಮೊಳಕೆಯೊಡೆದು
ಮೊಳಕೆಯು ಚಿಗುರಾಗಿ
ಚಿಗುರು ಎಲೆಯಾಗಿ
ಎಲೆಯು ಹೂವಾಗಿ
ಹೂವು ಕಾಯಿಯಾಗಿ
ಕಾಯಿ ಫಲವಾಗಿ
ಫಲವು ರುಚಿಸಲು
ರುಚಿಸಿ ಹೃನ್ಮನವನು
ತಣಿಸಿ ಸಾರ್ಥಕಗೊಳ್ಳಲು
ಹಲವು ದಿನಗಳ ಬೇಕಾಗಿರಲು
ಎಲೈ ಮಾನವನೇ ಆತುರವೇಕೆ
ಬೀಜ ಫಲವಾಗುವ ರೀತಿಯಲಿ
ತಾಳಿದವರು ಬಾಳಿಯಾರಲ್ವೇ
ತಿಳಿದು ಬಾಳಿದರೆ ಸಾರ್ಥಕ ಬಾಳದು
ತಿಳಿಗೇಡಿಯಂತಾಡಿದರೆ ಗೋಳದು
ತಿಳಿದು ನಡೆಯಿರೆಂದರೆಮ್ಮ
ಶ್ರೀ ತರಳಬಾಳು ಸದ್ಗುರುವು.
ಮರೆತರೆ
ಕಾವಿಯ ತೊಟ್ಟರೇನಯ್ಯ
ಕಾಮದ ಮನವ ಬಿಡದಿರೆ
ಖಾದಿಯ ಉಟ್ಟರೇನಯ್ಯ
ಗಾದಿಯ ಆಸೆಯ ಬಿಡದಿರೆ
ಖಾಕಿಯ ಧರಿಸಿದರೇನಯ್ಯ
ಶೋಕಿಯ ಲಂಚವ ಬಿಡದಿರೆ
ಭಕ್ತರಂತೆ ನಾಮವ ಹಾಕಿದರೇನಯ್ಯ
ಶಿವ ಶರಣರನು ಅರಿಯದಿರೆ
ಮಾನವರಾಗಿ ಹುಟ್ಟಿದರೇನಯ್ಯ
ಶ್ರೀತರಳಬಾಳು ಸದ್ಗುರುವ ಮರೆತರೆ.
ಅಯ್ಯ
ಮರದ ನೆರಳಲ್ಲಿ
ತಂಗಬಹುದಯ್ಯ
ನರನ ನೆರಳಲ್ಲಿ
ತಂಗಬಹುದೇನಯ್ಯ
ದೂರಾಲೋಚನೆಯ
ಉಳ್ಳವರ ನಂಬಬಹುದಯ್ಯ
ದುರಾಲೋಚನೆಯ
ಉಳ್ಳವರ ನಂಬಬಹುದೇನಯ್ಯ
ಹರಿಹರ ಬ್ರಹ್ಮರಾದಿಗಳು
ಮುನಿದರು ಬದುಕಬಹುದಯ್ಯ
ಶ್ರೀ ತರಳಬಾಳು ಸದ್ಗುರುವು
ಮುನಿದರೆ ಬದುಕಬಹುದೇನಯ್ಯ.
ಶ್ರೀರಕ್ಷೆ
ಶ್ರೀ ತರಳಬಾಳು ಸದ್ಗುರುವಿನ
ಶ್ರೀರಕ್ಷೆಯೂ ಜೊತೆಯಿರಲು
ಶ್ರೀ ಸಾಮಾನ್ಯರು ಕೂಡ
ಅಸಾಮಾನ್ಯರಾಗಿ ಜಗದೊಳು
ಉರಿಯುವ ಬೆಂಕಿಯೆದುರು
ಮೈಯೊಡ್ಡಿ ನಿಲ್ಲಬಹುದಯ್ಯ
ಹರಿಯುವ ನದಿಯೆದುರು
ಈಜಿ ದಡ ಸೇರಬಹುದಯ್ಯ
ಬಿರುಸಾದ ಗಾಳಿಯೆದರು
ನಾವೆಯ ನಡೆಸಬಹುದಯ್ಯ
ಹರಿಹರ ಬ್ರಹ್ಮಾದಿಗಳೆದುರು
ಬವರವನು ಗೆಲ್ಲಬಹುದಯ್ಯ.
- ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್ ಸ್ಕೂಲ್
ಅನುಭವಮಂಟಪ, ದಾವಣಗೆರೆ.
ದೂ.ಸಂ.9901419695.
