Connect with us

Dvgsuddi Kannada | online news portal | Kannada news online

ತರಳಬಾಳು ಶ್ರೀ ಅಶೀರ್ವಾದ ಪಡೆದ ಗಯಾನ ದೇಶದ ಉಪಾಧ್ಯಕ್ಷ ಭರತ್ ಜಗದೇವ್; ಶ್ರೀಗಳಿಗೆ ಗಯಾನ ದೇಶದ ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನ

ಪ್ರಮುಖ ಸುದ್ದಿ

ತರಳಬಾಳು ಶ್ರೀ ಅಶೀರ್ವಾದ ಪಡೆದ ಗಯಾನ ದೇಶದ ಉಪಾಧ್ಯಕ್ಷ ಭರತ್ ಜಗದೇವ್; ಶ್ರೀಗಳಿಗೆ ಗಯಾನ ದೇಶದ ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನ

ನವದೆಹಲಿ: ನಿನ್ನೆ (ಫೆ.23) ಸಂಜೆ ನವದೆಹಲಿಯಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗಯಾನ ದೇಶದ ಉಪಾಧ್ಯಕ್ಷ ಡಾ ಭಾರತ್ ಜಗದೇವ್ ಭೇಟಿ ಮಾಡಿ ಆಶೀರ್ವಾದ ಪಡೆದರು.

ತರಳಬಾಳು ಶ್ರೀಗಳು ಕೈಗೊಂಡಿರುವ ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಡಾ ಭಾರತ್ ಜಗದೇವ್ ರೊಂದಿಗೆ ಹಂಚಿಕೊಂಡರು. ಇಬ್ಬರೂ ಸಂಸ್ಕೃತ, ಭಾರತ ಮತ್ತು ಗಯಾನಾದಲ್ಲಿನ ಹಿಂದೂ ಆಚರಣೆಗಳು, ಅಭಿವೃದ್ಧಿಯ ವಿಷಯಗಳ ಕುರಿತು ಚರ್ಚಿಸಿದರು. ಶ್ರೀ ಭರತ್ ಜಗದೇವ್ ರವರುವಿಶೇಷವಾಗಿ 20 ಕ್ಕೂ ಅಧಿಕ ಏತ ನೀರಾವರಿಗಳ ಮೂಲಕ 500 ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸುವ ಸಾರ್ಥಕ ಕಾರ್ಯದ ಬಗ್ಗೆ ಎಳೆ ಎಳೆಯಾಗಿ ತಿಳಿದುಕೊಂಡರು.300 ವರ್ಷಗಳಷ್ಟು ಹಳೆಯದಾದ ಭರಮಸಾಗರ ಕೆರೆಯು ದಶಕಗಳ ನಂತರ ಮೊದಲ ಬಾರಿಗೆ ಭರ್ತಿಯಾಗಿರುರುವ, ಪ್ರಧಾನ ಮಂತ್ರಿಗಳ ಮೇಲ್ಮಟ್ಟದ ಭದ್ರಾ ಯೋಜನೆ ಮತ್ತು ಭರಮಸಾಗರದ ಲಿಫ್ಟ್ ನೀರಾವರಿಯ ಕೆಲವು ದೃಶ್ಯಗಳೊಂದಿಗೆ ಶ್ರೀ ಜಗದ್ಗುರುಗಳವರು ಉಪಾಧ್ಯಕ್ಷರಿಗೆ ವಿವರಿಸಿದರು.

ಪ್ರತಿ ವರ್ಷ ಎಲ್ಲಾ ಜಾತಿ ಮತ್ತು ಧರ್ಮದ 50,000 ಕ್ಕೂ ಹೆಚ್ಚು ಮಕ್ಕಳಿಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಮೂಲಕ ಉಚಿತ ವಸತಿ, ಪ್ರಸಾದದೊಂದಿಗೆ ಶಿಕ್ಷಣ ದಾಸೋಹ ನೀಡುತ್ತಿರುವುದರ ಬಗ್ಗೆ ಮಾಹಿತಿ ಹೊಂದಿರುವ ಶ್ರೀ ಭರತ್ ಜಗದೇವ್ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿರುವ ಪೂಜ್ಯರ ಶಿಕ್ಷಣ ದಾಸೋಹವನ್ನು ಮನಸಾ ಶ್ಲಾಘಿಸಿದರು.

ಶ್ರೀ ಜಗದ್ಗುರುಗಳವರ ಭಾರತದ ಸಮಾಜ ಸೇವಾ ಕಾರ್ಯಗಳನ್ನು ಹಲವಾರು ವರ್ಷಗಳಿಂದ ಗಮನಿಸಿರುವ ಗಯಾನಾದ ಉಪಾಧ್ಯಕ್ಷ ಭರತ್ ಜಗದೇವ್ , ಗಯಾನ ದೇಶದಲ್ಲಿ ಸರ್ಕಾರದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವರಿದ್ದು, ಆ ಕಾರ್ಯಕ್ರಮಕ್ಕೆ ದಯಮಾಡಿಸುವಂತೆ ಗಯಾನಾ ದೇಶದಲ್ಲಿರುವ ಭಾರತೀಯ ವಿದೇಶಾಂಗ ಸೇವೆಯ ರಾಯಭಾರಿ ಶ್ರೀನಿವಾಸ್ IFS ರೊಂದಿಗೆ ಶಿಷ್ಟಾಚಾರದೊಂದಿಗೆ ಭಕ್ತಿಯ ಆಮಂತ್ರಣವಿತ್ತರು. ಆಧ್ಯಾತ್ಮಿಕತೆಯ ಪ್ರಾಮುಖ್ಯತೆ ಮತ್ತು ಸಮಾಜದ ಒಳಿತಿಗಾಗಿ ತಂತ್ರಜ್ಞಾನದ ಬಳಕೆಯ ಕುರಿತು ಪೂಜ್ಯರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಗಯಾನ ದೇಶದ ರಾಯಭಾರಿ ಡಾ. ಕೆ ಜೆ ಶ್ರೀನಿವಾಸ್ ರವರು, ದಾವಣಗೆರೆ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ್ ರವರ ಪುತ್ರ ಬಿಜೆಪಿ ಯುವ ಮುಖಂಡ ಜಿ.ಎಸ್ ಅನೀತ್ ಕುಮಾರ್ ರವರು ಹಾಜರಿದ್ದರು.

ಯಾರು ಈ ಶ್ರೀ ಭರತ್ ಜಗದೇವ್…?: 2020 ರಿಂದ ಗಯಾನಾದ ಘನತೆವೆತ್ತ ಉಪಾಧ್ಯಕ್ಷರಾದ ಭರತ್ ಜಯದೇವ್ ಅಧ್ಯಕ್ಷ ಇರ್ಫಾನ್ ಅಲಿ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಜಗದೇವ್ ರವರು ಅವರು 1964 ರಲ್ಲಿ ಬ್ರಿಟಿಷ್ ಗಯಾನಾದ ಡೆಮೆರಾರಾ-ಮಹೈಕಾದಲ್ಲಿನ ಯೂನಿಟಿ ವಿಲೇಜ್‌ನಲ್ಲಿ ಜನಿಸಿದ ಭಾರತೀಯ ಸಂಜಾತ. 1912 ರಲ್ಲಿ, ಅವರ ಅಜ್ಜ, ರಾಮ್ ಜಿಯಾವಾನ್ ಅವರು ಬ್ರಿಟಿಷ್ ಭಾರತದಲ್ಲಿನ ಯುನೈಟೆಡ್ ಪ್ರಾವಿನ್ಸ್‌ನ ಅವಧ್ ಪ್ರದೇಶದ ಅಮೇಥಿ ಜಿಲ್ಲೆಯ ಪ್ಯೂರ್ ಠಾಕುರೈನ್ ಗ್ರಾಮದಿಂದ ಬ್ರಿಟಿಷ್ ಗಯಾನಾಕ್ಕೆ ಭಾರತೀಯ ಒಪ್ಪಂದ ವ್ಯವಸ್ಥೆಯಡಿ ವಲಸೆ ಬಂದಿದ್ದರು. (ಇಂದಿನ ಭಾರತದ ಉತ್ತರ ಪ್ರದೇಶ ರಾಜ್ಯ) ಜಗದೇವ್ ಅವರು 13 ವರ್ಷದವರಾಗಿದ್ದಾಗ ಪೀಪಲ್ಸ್ ಪ್ರೋಗ್ರೆಸ್ಸಿವ್ ಪಾರ್ಟಿ (PPP), ಪ್ರಗತಿಶೀಲ ಯುವ ಸಂಘಟನೆಯ ಯುವ ಘಟಕವನ್ನು ಸೇರಿದರು. 16 ನೇ ವಯಸ್ಸಿನಲ್ಲಿ PPP ಯ ಸದಸ್ಯರಾದರು. ನಂತರ ಅವರು ಪಕ್ಷದ ಸ್ಥಳೀಯ ನಾಯಕತ್ವದ ಸ್ಥಾನಗಳಿಗೆ ಏರಿದರು. ಸುಸ್ಥಿರ ಅಭಿವೃದ್ಧಿ, ಹಸಿರು ಬೆಳವಣಿಗೆ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಹಲವಾರು ಜಾಗತಿಕ ನಾಯಕತ್ವ ಸ್ಥಾನಗಳನ್ನು ಹೊಂದಿದ್ದಾರೆ. ಗೌರವಾನ್ವಿತ ಶ್ರೀ ಭರತ್ ಜಗದೇವ್ ಶ್ರೀ ತರಳಬಾಳು ಜಗದ್ಗುರುಗಳವರ ಸಮಾಜ ಮುಖಿ ಸೇವೆಗಳನ್ನು ಮೆಚ್ಚಿಕೊಂಡವರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top