ಹೋಬಾರ್ಟ್: ಐಸಿಸಿ ಟಿ20 ವಿಶ್ವಕಪ್ ನ ಅರ್ಹತ ಸುತ್ತಿನಲ್ಲಿಂದು ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಮುಗ್ಗರಿಸಿದೆ. ಹೋಬಾರ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ಐರ್ಲೆಂಡ್ ಸೂಪರ್ 12 ಹಂತಕ್ಕೆ ಪ್ರವೇಶಿಸಿದರೆ, ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ ರನ್ ಗಳಿಸಲು ಪರದಾಡಿತು. ವಿಂಡೀಸ್ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತ್ತು. ಐರ್ಲೆಂಡ್ ತಂಡವು 17.3 ಓವರ್ ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಜಯ ಸಾಧಿಸಿತು. ವಿಂಡೀಸ್ ಪರ ಬ್ರಾಂಡನ್ ಕಿಂಗ್ ಅಜೇಯ ಆಟವಾಡಿದರು. 48 ಎಸೆತ ಎದುರಿಸಿದ ಕಿಂಗ್ 62 ರನ್ ಗಳಿಸಿದರೆ, ಜಾನ್ಸನ್ ಚಾರ್ಲ್ಸ್ 24 ರನ್, ಒಡೆನ್ ಸ್ಮಿತ್ ಅಜೇಯ 19 ರನ್ ಮಾಡಿದರು. ಐರ್ಲೆಂಡ್ ಪರ ಡೆಲಾನಿ ಮೂರು ವಿಕೆಟ್ ಪಡೆದರು.
ಸವಾಲಿನ ಗುರಿ ಪಡೆದ ಐರ್ಲೆಂಡ್ ಗೆ ಅನುಭವಿ ಪೌಲ್ ಸ್ಟರ್ಲಿಂಗ್ ಮತ್ತು ನಾಯಕ ಆಂಡ್ರ್ಯೂ ಬಾಲ್ಬಿರ್ನಿ ಉತ್ತಮ ಆರಂಭ ಒದಗಿಸಿದರು. ಆಂಡ್ರ್ಯೂ ಬಾಲ್ಬಿರ್ನಿ 37 ರನ್ ಗಳಿಸಿದರೆ, ಪೌಲ್ ಸ್ಟರ್ಲಿಂಗ್ ಅಜೇಯ 66 ರನ್ ಮಾಡಿದರು. ಎರಡನೇ ವಿಕೆಟ್ ಗೆ ಬಂದ ಟಕ್ಕರ್ ಅಜೇಯ 45 ರನ್ ಗಳಿಸಿದರು. 15 ಎಸೆತ ಇರುವಾಗಲೇ ಸುಲಭದಲ್ಲಿ ಐರ್ಲೆಂಡ್ ಜಯ ಗಳಿಸಿದೆ. ಈ ಮೂಲಕ ಐರ್ಲೆಂಡ್ ಈ ಬಾರಿ ಸೂಪರ್ 12 ಗೆ ಪ್ರವೇಶಿಸಿದೆ.ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ನ್ನು ಟೂರ್ನಿಯಿಂದ ಹೊರ ಬಿದ್ದಿದೆ.



