ಡಿವಿಜಿ ಸುದ್ದಿ, ತುಮಕೂರು: ಶಿರಾ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎಂ.ರಾಜೇಶ್ ಗೌಡ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಿಜಯ ರಾಜ್ ಸಾಥ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್ ಗೌಡ, ಕ್ಷೇತ್ರದ ಜನರು ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ನೋಡಿದ್ದಾರೆ. ಬಿಜೆಪಿಗೆ ಅವಕಾಶ ನೀಡುವ ಭರವಸೆ ಇದೆ. ಶಿರಾದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಟಿಕೆಟ್ ಆಕಾಂಕ್ಷಿಗಳಾಗಿದ್ದ ಎಸ್.ಆರ್.ಗೌಡ, ಬಿ.ಕೆ. ಮಂಜುನಾಥ್ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇಲ್ಲ.
ಶಿರಾ ತಾಲ್ಲೂಕಿನ ಜನರ ಆರಾಧ್ಯ ದೈವ ಜುಂಜಪ್ಪ ಸ್ವಾಮಿಯ ಆಶೀರ್ವಾದ ರಾಜೇಶ್ ಗೌಡ ಅವರ ಮೇಲಿದೆ. ದೇಶದ ಶೇ 85 ರಷ್ಟು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ದೇಶದ ಜನರು ಎಲ್ಲೆಡೆ ಬಿಜೆಪಿಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್ ಗೌಡ, ಸಂಸದ ಎ.ನಾರಾಯಣ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಇದ್ದರು.



