ಹರಿಹರ: ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ರಾಜಕಾರಣ ಬಂದಾಗಿದೆ. ಹೀಗಾಗಿ ನಾವು ಹೋರಾಟದಿಂದ ಹಿಂದೆ ಸರಿದಿದ್ದೇವೆ ಎಂದು ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಶ್ರೀಗಳು ಬರೆದುಕೊಂಡಿದ್ದಾರೆ.
ಶ್ರೀ ವಚನಾನಂದ ಸ್ವಾಮೀಜಿ ಬರೆದುಕೊಂಡಿದ್ದು ಈ ರೀತಿ ಇದೆ: ಪಂಚಮಸಾಲಿ ಅಮೃತ ಬಂಧುಗಳೇ, ಮೊದಲನಿಂದಲೂ ರಾಜ್ಯದ ಎಂಬತ್ನಾಲ್ಕು ಲಕ್ಷಕ್ಕಿಂತ ಅಧಿಕವಿರುವ ಪಂಚಮಸಾಲಿ ಅಮೃತಬಂಧುಗಳ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ನಮ್ಮ ನಿಲುವಾಗಿದೆ. ಒಬ್ಬ ವ್ಯಕ್ತಿ ಅಥವಾ ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವ ಅವಶ್ಯಕತೆ ಇಲ್ಲ. ಯಾರದೋ ತೇಜೋವಧೆಯಿಂದ ಯಾರು ಏನು ಸಾಧಿಸಲು ಸಾಧ್ಯವಿಲ್ಲ.ತೇಜಸ್ಸು ಮತ್ತು ವರ್ಚಸ್ಸುಗಳಿಂದ ಮಾತ್ರ ಸಾಧನೆ ಸಾಧ್ಯವಿದೆ. ಹೋರಾಟದಲ್ಲಿ ರಾಜಕಾರಣ ಬಂದಾಗ ನಾವು ಹಿಂದೆ ಸರಿಯುತ್ತೇವೆ, ಸಮುದಾಯದ ವಿಷಯ ಬಂದಾಗ ನಾವು ಮುಂಚೂಣಿಯಲ್ಲಿರುತ್ತೇವೆ.
ನಾವು ಯಾರೋ ಒಬ್ಬರು ಹೇಳಿದ ಹಾಗೆ ಕೇಳುವುದಿಲ್ಲ. ಅಖಂಡ ಪಂಚಮಸಾಲಿ ಸಮುದಾಯ ಹೇಳಿದ ಹಾಗೆ ಕೇಳುತ್ತೇವೆ. ನಮ್ಮ ಎಲ್ಲ ನಿರ್ಧಾರಗಳು ನಮ್ಮ ಸಮುದಾಯದ ಅಮೃತಬಂಧುಗಳಾದ ಅಖಂಡ ಪಂಚಮಸಾಲಿಗಳ ಒಕ್ಕೊರಲಿನ ನಿರ್ಧಾರವಾಗಿರಬೇಕು. ಯಾವುದೋ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವುದಕ್ಕಾಗಿ ಸಮುದಾಯವನ್ನು ಬಲಿಕೊಡುವಂತಹದ್ದಾಗಿರಬಾರದು. 1994 ರಿಂದ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಪ್ರಥಮ ರಾಜ್ಯಾಧ್ಯಕ್ಷರಾದ ಡಾ.ಶ್ರೀ ಬಿ.ಎಂ.ಹನುಮನಾಳ ಗುರುಗಳವರು ಆರಂಭದಿಂದಲೂ ಇಂದಿನವರೆಗೂ ಸಂಘದ ಹಿರಿಯರು ಮತ್ತು ನಾವು ಸಮುದಾಯಕ್ಕೆ 2ಎ ಸ್ಥಾನಮಾನ ನೀಡಬೇಕು ಎನ್ನುವ ಒತ್ತಾಯ ಮಾಡುತ್ತಾ ಬಂದ್ದಿದ್ದೇವೆ. ಈ ನಿರ್ಧಾರದ ಹಿಂದೆ ಅಖಂಡ ಪಂಚಮಸಾಲಿ ಸಮುದಾಯದ ಮುಖಂಡರು, ಭಕ್ತರು ಹಾಗೂ ಸಮಾನಮನಸ್ಕರ ಸಲಹೆಗಳನ್ನು ತಗೆದುಕೊಂಡಿದ್ದೇವೆ.
ಪಾದಯಾತ್ರೆಯ ನಂತರ ಧರಣಿ ಅಥವಾ ಸತ್ಯಾಗ್ರಹದಂತಹ ಹೋರಾಟಕ್ಕೆ ಮುಂದಾಗುವುದು ಸರಿಯಲ್ಲ. ಅದರಲ್ಲೂ ಸಾರ್ವಜನಿಕರ ಹಿತಾಸಕ್ತಿಗೆ, ಆಸ್ತಿಗೆ ಹಾನಿ ತರುವಂತಹ ಘಟನೆಗಳಿಗೆ ಅವಕಾಶ ಮಾಡಿಕೊಡುವ ವಿಷಯಗಳಿಗೆ ಆಸ್ಪದ ನೀಡಬಾರದು ಎನ್ನುವ ನಿಲುವು ನಮ್ಮದಾಗಿತ್ತು. ಲಕ್ಷಾಂತರ ಜನರು ಒಗ್ಗೂಡಿದ್ದಾಗ ಜನರ ಭಾವನೆಗಳನ್ನು ಕೆರಳಿಸದೆ ಸಮಾಧಾನವಾಗಿ ಸರಕಾರದ ಮೂಗನ್ನು ಹಿಡಿದು ಕೆಲಸ ಮಾಡಿಸುವ ನಿಟ್ಟಿನಲ್ಲಿ ಸಲಹೆಯನ್ನು ನೀಡಿದ್ದೇವೆ.
ಆದರೆ,ನಿನ್ನೆ ಸಮಾವೇಶ ನಡೆದ ನಂತರ ನಡೆದ ಘಟನೆಗಳು ಹೇಳಿಕೆಗಳು ಜನನಾಯಕರ ಹಿತಾಸಕ್ತಿಗೆ ಇಂಬು ನೀಡುವಂತಹದ್ದಾಗಿದ್ದವು. ಆದ್ದರಿಂದ ಆ ನಿರ್ಧಾರಗಳಿಗೆ ನಾವು ಬೆಂಬಲ ನೀಡಲಿಲ್ಲ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಬೆಳಗಿನ ಪಾದಯಾತ್ರೆಯನ್ನು ರದ್ದುಗೊಳಿಸಿದ್ದೆವು. ನಗರದ ಒಳಗೆ ಪಾದಯಾತ್ರೆ ಮಾಡುವ ಸಂಧರ್ಭದಲ್ಲಿ ಯಾರೋ ಕಿಡಿಗೇಡಿಗಳು ನಮ್ಮ ಹೋರಾಟವನ್ನು ಹಾಳು ಮಾಡುವ ಉದ್ದೇಶದಿಂದ ಗಲಾಟೆ ಪ್ರಾರಂಭಿಸಿದ್ದರೆ, ನಮ್ಮ ಸಮುದಾಯದ ಮೇಲೆ ಕಪ್ಪು ಚುಕ್ಕೆ ಬೀಳುವ ಅವಕಾಶ ಇರುತ್ತಿತ್ತು. ಆ ಹಿನ್ನಲೆಯಲ್ಲಿ ವಿಧಾನಸೌದದ ಕಡೆಗೆ ಪಾದಯಾತ್ರೆಯಂತಹ ನಿರ್ಧಾರಗಳಿಗೆ ಬೆಂಬಲ ನೀಡಲಿಲ್ಲ.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಇದೆ. ಹಿಂದಿನ ರಾತ್ರಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ನಾಗನಗೌಡರು ಹಾಗೂ ಹಿರಿಯರೊಂದಿಗೆ ಸಭೆಯನ್ನು ಮಾಡಿದ್ದೇವು. ಆ ಸಭೆಯಲ್ಲಿ ಧರಣಿ ಅಥವಾ ಸತ್ಯಾಗ್ರಹದಂತಹ ನಿರ್ಧಾರಗಳಿಗೆ ಹೋಗಬಾರದು, ಒಂದು ತಾರ್ಕಿಕ ಅಂತ್ಯಕ್ಕೆ ಬರಬೇಕು ಎನ್ನುವ ನಿರ್ಧಾರ ತಗೆದುಕೊಳ್ಳಲಾಗಿತ್ತು. ಅವರ ಸಲಹೆಯನ್ನು ನಾವು ಪಾಲಿಸಿದ್ದು, ಸಮುದಾಯದ ಭಾವನೆಗಳಿಗೆ ಒತ್ತಾಸೆಯಾಗಿದ್ದೇವೆ.
ಸಮುದಾಯಕ್ಕೆ ಹಾಗೂ ಸಮುದಾಯದ ನಿರ್ಧಾರಗಳಿಗೆ ನಾನು ಪ್ರಾಣ ನೀಡಲು ಸಿದ್ದನಾಗಿದ್ದೇನೆ. ಸಮುದಾಯಕ್ಕೆ ಏನು ಬೇಕು ಅದನ್ನು ಮಾಡುತ್ತೇನೆ. ಸಮುದಾಯದ ಜನರು ಸೇರಿಕೊಂಡು ಮುಂದಿನ ಹೋರಾಟಕ್ಕೆ ಅಣಿಯಾಗೋಣ. ಸರಕಾರ ನಮಗೆ ಭರವಸೆ ನೀಡಿದೆ, ಸರಕಾರ ಕಾರ್ಯನಿರ್ವಹಣೆಗೆ ಅದರದ್ದೇ ಆದಂತಹ ಸಮಯ ಬೇಕು. ಸರಕಾರಕ್ಕೇ ನೇರವಾಗಿ ಕಿವಿ ಹಿಂಡಿ, ಮೂಗು ಹಿಡಿದು ಕೆಲಸ ಮಾಡಿಸಬೇಕು. ಯಾರದ್ದೋ ಕಾಲು ಹಿಡಿಯುವುದು ಬೇಕಾಗಿಲ್ಲ. ಸಮುದಾಯದ ಹೋರಾಟದಲ್ಲಿ ನಾವು ಪ್ರಾಣವಾಯು ನೀಡುವ ಕೆಲಸ ಮಾಡಿದ್ದೇವೆ.
ಆದರೆ, ಮೂಗು ಹಿಡಿಯುವ ಭರಾಟೆಯಲ್ಲಿ ಯಾರದ್ದೋ ಪ್ರಾಣ ತಗೆಯುವುದಿಲ್ಲ.ಸರಕಾರವನ್ನು ನಿತ್ರಾಣಗೊಳಿಸುವುದಿಲ್ಲ. ನಾವು ಸಮುದಾಯಕ್ಕೆ ಪ್ರಾಣ ಕೂಡಾ ನೀಡಲು ಸಿದ್ದರಾಗಿದ್ದೇವೆ.
ಸಮುದಾಯದ ಹಿತಾಸಕ್ತಿ ನನ್ನ ಮೊದಲ ಆಯ್ಕೆ. ಜನನಾಯಕರ ಹಿತಾಸಕ್ತಿಗೆ ನಾವು ಸೊಪ್ಪು ಹಾಕುವ ಅವಶ್ಯಕತೆ ಇಲ್ಲ. ಸಮಾಜದ ವಿಷಯ ಬಂದಾಗ ಜನನಾಯಕ ಜನರ ಒಂದು ಭಾಗ ಮಾತ್ರ. ಹೋರಾಟಕ್ಕೆ ಕೈಜೋಡಿಸಿದಾಗ ನನ್ನ ನಿಲುವು ಸ್ಪಷ್ಟವಾಗಿದ್ದು, ಸಮಾಜದ ನಿರ್ಧಾರಕ್ಕೆ ಬಂದಾಗ ಬೇರೆ ಯಾರ ಮಾತು ಕೇಳಿಲ್ಲ.
ಬೆಣ್ಣೆ ಸರಕಾರದ ಕೈಯಲ್ಲಿ ಇದೆ. ಅದು ನಮ್ಮ ಕೈಯಲ್ಲಿ ಬಂದು ನಮ್ಮ ಆಹಾರ ಆಗಬೇಕು. ಅದನ್ನು ಹಾಳು ಮಾಡುವುದು ಸರಿಯಲ್ಲ. ನಮ್ಮ ಸಮುದಾಯದ ಯುವಕರಿಗೆ ಮೀಸಲಾತಿಯ ಮೂಲಕ ಶೈಕ್ಷಣಿಕ ಹಾಗೂ ಉದ್ಯೋಗ ಅವಕಾಶ ಒದಗಿಸುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬಸವಣ್ಣನವರ ವಚನ ಬಹಳ ಅರ್ಥಗರ್ಭಿತವಾಗಿದೆ
ಭೇರುಂಡನ ಪಕ್ಷಿಗೆ ದೇಹ ಒಂದೆ,
ತಲೆಯೆರಡರ ನಡುವೆ ಕನ್ನಡವ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ, ವಿಷ ಬಿಡುವುದೇ ಅಯ್ಯಾ
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.
ಶರಣು ಶರಣಾರ್ಥಿಗಳೊಂದಿಗೆ,
ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.