ನವದೆಹಲಿ: ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಹವಾಮಾನ ಇಲಾಕೆ ಸಿಹಿ ಸುದ್ದಿ ನೀಡಿದ್ದು, ಈ ಬಾರಿಯ ನೈಋತ್ಯ ಮುಂಗಾರು ಮಳೆ ನಾಲ್ಕು ದಿನ ಮುಂಚಿತವಾಗಿಯೇ ಆಗಮಿಸಲಿದೆ ಎಂದು ಭಾರತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಯಂತೆ ಕೇರಳಕ್ಕೆ ಜೂನ್ 1ರಂದು ಮಳೆ ಪ್ರವೇಶ ಮಾಡಬೇಕು. ಆದರೆ, ಈ ಬಾರಿ ಮುಂಗಾರು ಮಾರುತಗಳು 4 ದಿನ ಮುಂಚಿತವಾಗಿಯೇ ಕೇರಳಕ್ಕೆ ಪ್ರವೇಶ ಮಾಡಲಿದೆ. ಅಂದರೆ, ಮೇ 27 ರಂದೇ ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
16 ವರ್ಷ ಬಳಿಕ ಮುಂಚಿತವಾಗಿ ಪ್ರವೇಶ
ಈ ಬಾರಿ(2025) ಮುಂಗಾರು ಮಳೆ (monsoon rain) ಸಾಮಾನ್ಯಕ್ಕಿಂತ ಹೆಚ್ಚು ಆಗಲಿದೆ ಎಂದು ಐಎಂಡಿ ಮಾಹಿತಿ ನೀಡಿತ್ತು.ನಿರೀಕ್ಷೆಯಂತೆ ಮಾನ್ಸೂನ್ ಕೇರಳಕ್ಕೆ ಆಗಮಿಸಿದರೆ, ಐಎಂಡಿ ದತ್ತಾಂಶದ ಪ್ರಕಾರ, 2009 ರಲ್ಲಿ ಮೇ 23 ರ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿ ಪ್ರವೇಶ ಮಾಡುತ್ತಿವೆ.16 ವರ್ಷಗಳಲ್ಲಿ ಇದೇ ಮೊದಲು ನಾಲ್ಕು ದಿನ ಮೊದಲು ಮಳೆ ಪ್ರವೇಶಿಸಿದಂತಾಗುತ್ತದೆ.
ಶೇ. 105 ರಷ್ಟು ಮಳೆ ಸಾಧ್ಯತೆ
ಪ್ರತಿ ವರ್ಷ ನೈಋತ್ಯ ಮಾನ್ಸೂನ್ ಜೂನ್ 1 ರ ವೇಳೆಗೆ ಕೇರಳದ ಪ್ರವೇಶಿಸಿ ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಈ ಬಾರಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ದೀರ್ಘಾವಧಿಯ ಸರಾಸರಿ 87 ಸೆಂ.ಮೀ. ಮಳೆಯ ಶೇ. 105 ರಷ್ಟು ಮಳೆಯಾಗಿದೆ ಮಾಹಿತಿ ನೀಡಲಾಗಿದೆ.



