ನವದೆಹಲಿ: ಮುಂದಿನ ಮೂರು- ನಾಲ್ಕು ತಿಂಗಳ ಒಳಗೆ ಕೋವಿಡ್ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ವೆಬಿನಾರ್ ನಲ್ಲಿ ಮಾತನಾಡಿದ ಅವರು, ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಕೋವಿಡ್ ಸೋಂಕಿಗೆ ಲಸಿಕೆ ಲಭ್ಯವಾಗಲಿವೆ ಎಂಬ ವಿಶ್ವಾಸವಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ವಾರಿಯರ್ಸ್ ಗಳಿಗೆ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಕೋವಿಡ್ ಲಸಿಕೆ ಸಿದ್ದವಾದ ನಂತರ ಅದನ್ನು ದೇಶದೆಲ್ಲೆಡೆ ಸರಬರಾಜು ಮಾಡಲು ವ್ಯವಸ್ಥಿತ ಯೋಜನೆಯನ್ನು ನಾವು ರೂಪಿಸುತ್ತಿದ್ದೇವೆ. 2021ರ ಜುಲೈ- ಆಗಸ್ಟ್ ವೇಳೆಗೆ ದೇಶದ 25-30 ಕೋಟಿ ಜನರಿಗೆ 400-500 ಮಿಲಿಯನ್ ಡೋಸ್ ಗಳು ಲಭ್ಯವಾಗಲಿದೆ. ಲಸಿಕೆ ಹಂಚುವಾಗ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ವಾರಿಯರ್ಸ್ ಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ 65 ವರ್ಷಕ್ಕಿಂತ ಹಿರಿಯರಿಗೆ , ನಂತರ 55ರಿಂದ 65 ವರ್ಷದ ಹಿರಿಯರಿಗೆ ಹೀಗೆ ಆದ್ಯತೆಯ ಮೇರೆಗೆ ಲಸಿಕೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.



