ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಜೋಡಿ ನಾಗಚೈತನ್ಯ- ಸಮಂತಾ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದು, ಮದುವೆಯಾದ ನಾಲ್ಕು ವರ್ಷಗಳ ನಂತರ ಈ ಜೋಡಿ ಬೇರೆಯಾಗಿದ್ದಾರೆ.
ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಸಮಂತಾ, ಅಕ್ಕಿನೇನಿ ಸರ್ ನೇಮ್ ತೆಗೆದುಹಾಕಿದ್ದರು. ಇದು ದಾಂಪತ್ಯ ಜೀವನ ಬಿರುಕು ಉಂಟಾಗಿದೆ ಎಂದ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇತ್ತೀಚೆಗೆ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ನಾಗಚೈತನ್ಯ ಅವರ ಸಿನೆಮಾ ಲವ್ ಸ್ಟೋರಿ ಬಿಡುಗಡೆ ಸಮಾರಂಭದಲ್ಲಿ, ಸಕ್ಸಸ್ ಪಾರ್ಟಿಯಲ್ಲಿ ಸಹ ಸಮಂತಾ-ನಾಗ ಚೈತನ್ಯ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ, ಆಗ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಿತ್ತು.
ಇಂದು ಈ ವಿಷಯವನ್ನು ಅಧಿಕೃತವಾಗಿ ಸಮಂತಾ ತಿಳಿಸಿದ್ದಾರೆ. ಬಹಳ ಯೋಚನೆ ಮಾಡಿ ನಾವು ದೂರವಾಗುತ್ತಿದ್ದೇವೆ ಎಂದು ಇಬ್ಬರೂ ತಿಳಿಸಿದ್ದಾರೆ. ಆ ಮೂಲಕ ಮತ್ತೊಂದು ಸಿನಿಜೋಡಿಯ ದಾಂಪತ್ಯ ಜೀವನ ವಿಚ್ಛೇದನದಲ್ಲಿ ಅಂತ್ಯವಾಗಿದೆ.ಟಾಲಿವುಡ್ ನ ಜನಪ್ರಿಯ ತಾರೆಯರಾಗಿದ್ದ ನಾಗ ಚೈತನ್ಯ ಮತ್ತು ಸಮಂತಾ ಹಲವು ವರ್ಷಗಳ ಕಾಲ ಪ್ರೀತಿಸಿ 2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ವಿವಾಹವಾಗಿದ್ದರು.



