ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುಂದುವರಿದಿದ್ದು, ಮೇಯರ್ ಆಗಿ ಜೆಡಿಎಸ್ ಪಕ್ಷದ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮೈಸೂರಿನ 23ನೇ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಅಧಿಕಾರ ಸ್ವೀಕರಿಸಲಿದ್ದಾರೆ.
ಜೆಡಿಎಸ್ ಪಕ್ಷದ ರುಕ್ಮಿಣಿ ಮಾದೇಗೌಡ ಅವ್ರು 43 ಮತಗಳನ್ನ ಪಡೆದಿದ್ರೆ, ಬಿಜೆಪಿ ಪಕ್ಷದ ಸುನಾಂದ ಪಾಲನೇತ್ರಗೆ 26 ಮತಗಳನ್ನ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಮತಗಳನ್ನು ಪಡೆದಿಲ್ಲ. ಇನ್ನು ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್ ವಶವಾಗಿದೆ. ಜೆಡಿಎಸ್ ಮೈತ್ರ ಮುರಿದುಕೊಳ್ಳುವುದಾಗಿ ಬೆಳೆಗ್ಗೆ ಹೇಳಿದ್ದರಿಂದ ಬಿಜೆಪಿ ಮೇಯರ್ ಸ್ಥಾನಕ್ಕೇರುವ ವಿಶ್ವಾಸದಲ್ಲಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿಗೆ ನಿರಾಸೆಯಾಗಿದೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆದಿದೆ. ಈ ಮೂಲಕ ಮರು ಮೈತ್ರಿ ಮುಂದುವರಿದೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದರು. ಹಲವು ಸುತ್ತಿನ ಮಾತುಕತೆ ಬಳಿಕ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟು ಕೊಟ್ಟಿದ್ದೇವೆ ಎಂದಿದ್ದಾರೆ.
ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ. ಪದೇ ಪದೇ ನಮ್ಮ ಪಕ್ಷವನ್ನು ಕೆಣಕುವ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಎಂಬುದು ಈಗ ಎಲ್ಲಿದೆ? ಜೆಡಿಎಸ್ ಒಂದು ಪಕ್ಷವೇ ಅಲ್ಲ ಎಂದೆಲ್ಲ ಹೇಳುತ್ತಿದ್ದಾರೆ. ಹಾಗಾಗಿ ಜೆಡಿಎಸ್ ಶಕ್ತಿಯನ್ನು ತೋರಿಸುವ ನಿಟ್ಟಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಮಾಜಿ ಸಿಎಂ ಕುಮಾರ್ ಸ್ವಾಮಿ ಬೆಳಗ್ಗೆ ಹೇಳಿದ್ದರು.
ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಗೂ ನನ್ನ ಜೊತೆ ಮಾತನಾಡಲು ಬಿಡುತ್ತಿಲ್ಲ. ನನ್ನೊಂದಿಗೆ ಮಾತನಾಡದಂತೆ ಒತ್ತಡ ಹೇರುತ್ತಿದ್ದಾರೆ. ನಾವು ಇಲ್ಲಿ ಯಾರಿಗೂ ಸವಾಲು ಹಾಕಲು ಬಂದಿಲ್ಲ. ಕಿಂಗ್ ಮೇಕರ್ ಆಗಲೂ ಬಯಸುತ್ತಿಲ್ಲ. ನಮ್ಮದೇನಿದ್ದರೂ 2023ರ ಚುನಾವಣೆ ಮೇಲೆ ಗುರಿ ಎಂದು ಹೇಳಿದರು.
ಇನ್ನು ಬಿಜೆಪಿಯಿಂದಲೂ ನಾವು ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ರಾಜ್ಯವನ್ನು ಬಿಜೆಪಿ ಲಘುವಾಗಿ ಪರಿಗಣಿಸುತ್ತಿದೆ. ಅಧಿಕಾರ ಸಿಗದಿದ್ದರೂ ತೊಂದರೆಯಿಲ್ಲ. ಅಂತರ ಕಾಯ್ದುಕೊಳ್ಳುವುದು ಮುಖ್ಯ ಎಂದರು.
ಒಟ್ಟು 73 ಪಾಲಿಕೆ ಸದಸ್ಯರಿದ್ದು, ಇದರಲ್ಲಿ ಬಿಜೆಪಿ 25 ಸ್ಥಾನ, ಕಾಂಗ್ರೆಸ್ 20 ಹಾಗೂ ಜೆಡಿಎಸ್ 22 ಸ್ಥಾನ ಗೆದ್ದಿದ್ದವು. ಮೈಸೂರು ಪಾಲಿಕೆ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 37 ಆಗಿತ್ತು.



