ಬೆಂಗಳೂರು: ಕನ್ನಡದ ನಿಘಂಟು ತಜ್ಞ, ಸಾಹಿತಿ ಹಾಗೂ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ ಇಂದು ನಿಧನ ಹೊಂದಿದ್ದಾರೆ. 108 ವರ್ಷದ ವೆಂಕಟಸುಬ್ಬಯ್ಯ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದರು. ತಡರಾತ್ರಿ 1:30ಕ್ಕೆ ಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ.
1913ರ, ಆಗಸ್ಟ್ 23ರಂದು ಮೈಸೂರಿನಲ್ಲಿ ಜನಿಸಿದ ವೆಂಕಟಸುಬ್ಬಯ್ಯ ಅವರು, ಕನ್ನಡದ ಅಪ್ರತಿಮ ಭಾಷಾ ತಜ್ಞರು, ಸಂಶೋಧಕರು, ಬರಹಗಾರರು ಹಾಗೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಾಚೀನ ಸಾಹಿತ್ಯ ಅಧ್ಯಯನ ಹಾಗೂ ಅನುವಾದ ಕ್ಷೇತ್ರಗಳಲ್ಲಿ ಅವರ ಸೇವೆ ಅಪಾರ. ಇನ್ನು ಕನ್ನಡ ನಿಘಂಟು ತಜ್ಞರೆಂದೇ ಖ್ಯಾತರಾಗಿರುವ ಅವರಿಗೆ ಪದ್ಮಶ್ರೀ, ನಾಡೋಜ, ಪಂಪ, ಭಾಷಾ ಸನ್ಮಾನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.



