ಬೆಂಗಳೂರು: ಈ ಬಾರಿ ತೀವ್ರ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಈ ಬಾರಿಯ ಚಳಿಗಾಲವೂ ಮೈಕೊರೆಯುವ ಚಳಿಯಿಂದ ಕೂಡಿರುವುದಿಲ್ಲ. ಸಾಮಾನ್ಯ ಚಳಿ ಅಷ್ಟೇ ಇರಲಿದೆ. ಇಡೀ ದೇಶದಲ್ಲಿಯೇ ನೈರುತ್ಯ ಮುಂಗಾರು ಕೊನೆಗೊಂಡಿದೆ. ಹಿಂಗಾರು ಮಳೆ ಅವಧಿ ಆರಂಭವಾಗಿದೆ. ಈ ಬಾರಿ ಹಿಂಗಾರು ಸಹ ದುರ್ಬಲವಾಗಿರಲಿದೆ. ಹಿಂಗಾರು ಅವಧಿಯಲ್ಲಿ ತಮಿಳುನಾಡು ಕರಾವಳಿ ಪ್ರದೇಶದಲ್ಲಿ ಮಳೆಯಾಗಬೇಕು. ಸದ್ಯ ಮಳೆಗೆ ಪೂರಕ ವಾತಾವರಣವಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದ ರಾಜ್ಯದಲ್ಲಿ ಈ ವರ್ಷ ಚಳಿಗಾಲ ಆರಂಭ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ಸಾಮಾನ್ಯ ಚಳಿ ಇರುವ ಸಾಧ್ಯತೆಯಿದೆ.ಎಲ್ ನಿನೊ ವಿದ್ಯಮಾನ ಮರುಕಳಿಸಿದ್ದರಿಂದ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಮಳೆಗಾಲದ ಬಹುತೇಕ ದಿನಗಳಲ್ಲಿ ಬಿಸಿಲ ವಾತಾವರಣ ಕಂಡುಬಂದಿತ್ತು. ಚಳಿಗಾಲದ ಮೇಲೂ ಅದರ ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು ಚಳಿ ಕಡಿಮೆ ಇರದೆ.
ಎಲ್ ನಿನೊ ಫೆಬ್ರುವರಿ ಅಥವಾ ಮಾರ್ಚ್ 15ರವರೆಗೆ ಇರಲಿದ್ದು ಚಳಿಗಾಲದಲ್ಲಿ ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿಯುವ ಸಾಧ್ಯತೆ ತೀರ ಕಡಿಮೆ. ಉಷ್ಣಾಂಶ ಕನಿಷ್ಠ ಮಟ್ಟಕ್ಕೆ ಕುಸಿಯುವುದಿಲ್ಲ. ಫೆಬ್ರುವರಿ 15ರ ನಂತರ ಉಷ್ಣಾಂಶದಲ್ಲಿ ಮತ್ತೆ ಏರಿಕೆ ಆಗಲಿದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.



