ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಒಂದು ರಾಷ್ಟ್ರ, ಒಂದು ಚುನಾವಣೆ ಕುರುತು ಚರ್ಚೆ ಆರಂಭವಾಯಿತು. ಚರ್ಚೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗೆ ಇಳಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಇದು ಆರ್ ಎಸ್ ಎಸ್ ಅಜೆಂಡಾ ಎಂದು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿ ಪ್ರತಿಭಟಿಸಿದರು. ಶಾಸಕರ ವರ್ತನೆಗೆ ಕೆಂಡಾಮಂಡಲರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಂತಹ ವರ್ತನೆ ಸಹಿಸುವುದಿಲ್ಲ ಎಂದರು.
ಸದನದಲ್ಲಿ ಈ ರೀತಿ ಶರ್ಟ್ ಬಿಚ್ಚಿ ಪ್ರತಿಭಟಿಸುವುದು ಶೋಭೆಯಲ್ಲ. ಅಶಿಸ್ತಿನಿಂದ ನಡೆದುಕೊಂಡರೆ ಸದನದಿಂದ ಹೊರಹಾಕಬೇಕಾಗುತ್ತದೆ. ಇಂತಹ ವರ್ತನೆ ಕ್ಷೇತ್ರದ ಜನತೆಗೆ ನೀವು ತೋರುವ ಅಗೌರವ ಎಂದು ಕಿಡಿಕಾರಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಗದ್ದಲದ ನಡುವೆ ಸ್ಪೀಕರ್ ಚರ್ಚೆಯ ವಿಷಯ ಓದಿದರು.ಕಾಂಗ್ರೆಸ್ ಪ್ರತಿಭಟನೆ ಜೋರಾಗುಥತಿದ್ದಂತೆ ಸದನ 15 ನಿಮಿಷ ಮುಂದೂಡಲಾಯಿತು. ಇದಾದ ಬಳಿಕ ಸದನದಲ್ಲಿ ಅಶಿಸ್ತು ತೋರಿದ ಶಾಸಕ ಸಂಗಮೇಶ್ ಅವರನ್ನು ಒಂದು ವಾರ ಸದನಕ್ಕೆ ನಿಷೇಧಹೇರಿ ಸ್ಪೀಕರ್ ಆದೇಶಿಸಿದರು.



