ಶಿವಮೊಗ್ಗ: ನಿನ್ನೆ ರಾತ್ರಿ (ಜ. )10.30ರ ಸುಮಾರಿಗೆ ನಡೆದ ಭಾರೀ ಸ್ಫೋಟಕ್ಕೆ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದರು. ಜಿಲೆಟಿನ್ ತುಂಬಿದ್ದ ಲಾರಿಯೊಂದು ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ತೆರಳುತ್ತಿತ್ತು. ಕ್ವಾರಿ ರೀಚ್ ಮುಟ್ಟುವ ಮುನ್ನವೇ ಲಾರಿಯಲ್ಲಿದ್ದ ಜಿಲೆಟಿನ್ ಕಡ್ಡಿ ಬ್ಲಾಸ್ಟ್ ಆಗಿದೆ. ಇದರ ತೀವ್ರತೆ ಎಷ್ಟಿತ್ತೆಂದರೆ ಲಾರಿಯಲ್ಲಿದ್ದ ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿದೆ. ಮೃತ ದೇಹಗಳನ್ನು ಹುಡುಕುವುದೂ ಅಸಾಧ್ಯವಾಗಿದೆ.
ದುರಂತ ನಡೆದ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರ ತಂಡದ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ತನಿಖೆಗೆ ಬೇಕಿದ್ದ ಅವಶೇಷಗಳನ್ನು ಸಂಗ್ರಹಿಸಲಾಗಿದೆ. ಇದುವರೆಗೆ ಐವರ ಮೃತದೇಹಗಳು ಪತ್ತೆಯಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಇನ್ನು ಸ್ಫೋಟಕ ತುಂಬಿದ್ದ ಲಾರಿ ಎಲ್ಲಿಂದ ಬಂದಿತ್ತೆಂಬ ಬಗ್ಗೆ ತನಿಖೆ ನಡೆಸಿ ಪೊಲೀಸರು, ಎಫ್ಎಸ್ಎಲ್ ತಜ್ಞರು ವರದಿ ನೀಡುತ್ತಾರೆ. ಅಕ್ರಮ ಗಣಿಗಾರಿಕೆ ಸಂಬಂಧ ಈವರೆಗೆ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದಿದ್ದರೆ ಕ್ರಮಕೈಗೊಳ್ಳುತ್ತಿದ್ದೆವು. ಸ್ಫೋಟಕ ವಸ್ತುಗಳು ಹೇಗೆ ಬಂತು ? 20 ಎಕರೆ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಲೈಸೆನ್ಸ್ ಇತ್ತಾ? ಎಂಬುದರ ಬಗ್ಗೆ ತನಿಖೆ ನಂತರವಷ್ಟೇ ಹೇಳಬಹುದು. ಸ್ಫೋಟ ದುರಂತ ಪ್ರಕರಣ ಸಂಬಂಧ ಮೂವರ ಬಂಧನವಾಗಿದೆ. ಗಣಿ ಪ್ರದೇಶದ ಮಾಲೀಕ ಅವಿನಾಶ್ ಕುಲಕರ್ಣಿ, ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದಿದ್ದ ಸುಧಾಕರ್, ಕಲ್ಲು ಗಣಿಗಾರಿಕೆಗೆ ಮಧ್ಯಸ್ಥಿಕೆ ವಹಿಸಿದ್ದ ನರಸಿಂಹನನ್ನು ಬಂಧಿಸಿ ಶಿವಮೊಗ್ಗ ಗ್ರಾಮಾಂತರ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



