ಬೆಂಗಳೂರು: ಕೊರೊನಾ ಹಿನ್ನೆಲೆ ಕ್ಲೋಸ್ ಆಗಿದ್ದ, ಶಾಲಾ-ಕಾಲೇಜುಗಳನ್ನು ಜನವರಿ 1ರಿಂದ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ. ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯಂತೆ ಜ.1ರಿಂದ 10 ಮತ್ತು 12ನೇ ತರಗತಿ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
6ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಉಳಿದ ತರಗತಿಗಳನ್ನು ಹಂತ ಹಂತವಾಗಿ ಪ್ರಾರಂಭಿಸಲು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಶಿಕ್ಷಣ ಇಲಾಖೆ ಅಕಾರಿಗಳು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಪಡೆದು, ಅವರ ಸಲಹೆಯಂತೆ ಶಾಲಾಕಾಲೇಜುಗಳನ್ನು ಪ್ರಾರಂಭಿಸಲಾಗುವುದು. 15 ದಿನಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಇತರ ತರಗತಿಗಳನ್ನು ಪ್ರಾರಂಭಿಸುವ ಕುರಿತು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಸಚಿವ ಸುರೇಶ್ಕುಮಾರ್ ಮಾತನಾಡಿ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರಿಗೆ, ಗ್ರಾಮೀಣಾಭೀವೃದ್ಧಿ ಪಂಚಾಯತ್ ರಾಜ್, ನಗರಾಭಿವೃದ್ದಿ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಮುಖ್ಯಸ್ಥರೊಂದಿಗೆ ಸುದೀರ್ಘ ಚರ್ಚೆನಡೆಸಿ ಶಾಲೆಗಳನ್ನು ತೆರೆಯುವ ತೀರ್ಮಾನಕ್ಕೆ ಬಂದಿದ್ದೇವೆ.10ನೇ ಮತ್ತು ಪಿಯುಸಿ ವಿದ್ಯಾರ್ಥಿಗಳು ಮಂಡಳಿ ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಶಾಲೆ-ಕಾಲೇಜಿಗೆ ಹಾಜರಾತಿ ಕಡ್ಡಾಯ ವಲ್ಲ. ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್ ಲೈನ್, ಯುಟ್ಯೂಬ್ ಚಾನೆಲ್ ಮತ್ತು ಇತರ ಮೂಲಗಳಿಂದಲೂ ಅಭ್ಯಾಸ ಮಾಡಬಹುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೋಷಕರ ಅನುಮತಿ ಪತ್ರವನ್ನು ಪಡೆದುಕೊಂಡು ಹಾಜರಾಗಬಹುದು. ಒಂದು ವೇಳೆ ಶಾಲೆಗೆ ಬರಲು ಆಗದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗೆ ಹಾಜರಾಗಬಹುದು.ಜ್ವರದ ಲಕ್ಷಣವಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಒಳಪಡಿಸಬೇಕು. ಯಾವುದೇ ವಿದ್ಯಾರ್ಥಿಯೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ನಿಯಮವಿಲ್ಲ. ಒಂದು ವೇಳೆ ಯಾವುದೇ ಅಂತಹ ಲಕ್ಷಣಗಳಿದ್ದರೆ ಶಾಲೆ ಕೊಠಡಿಯಲ್ಲಿ ಪ್ರತ್ಯೇಕವಾದ ಐಸೋಲೇಷನ್ ಕೇಂದ್ರ ತೆರೆದಿರುತ್ತೇವೆ. ಅಲ್ಲಿ ಚಿಕಿತ್ಸೆಗೊಳಪಡಿಸಬೇಕೆಂದು ಸೂಚಿಸಿದರು.ಜೊತೆಗೆ ಎಸ್ಒಪಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ ವತಿಯಿಂದ ಸರ್ಕಾರಿ ಶಾಲಾ ಕಾಲೇಜುಗಳನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ತಿಳಿಸಿದರು.