ಬೆಂಗಳೂರು: ಮುಂದಿನ ಮೂರು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಐದಾರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಕೆಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಮುಂದಿನ 48 ಗಂಟೆಯೊಳಗೆ ದಕ್ಷಿಣ ಒಳನಾಡಿನ ಕೊಡಗು, ಮಂಡ್ಯ, ಹಾಸನ, ಚಾಮರಾಜನಗರದ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಮಳೆಯಾಗಲಿದೆ. ಹೀಗಾಗಿ ಹವಾಮಾನ ಇಲಾಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಒಳನಾಡಲ್ಲಿ ಮಳೆ ಮುನ್ಸೂಚನೆ ಇದ್ದರೆ ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ತಾಪಮಾನ ಏರಿಕೆ ಆಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನ ವಿಜಯಪುರ, ಗದಗ, ರಾಯಚೂರಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲೂ ತಾಪಮಾನ ಏರಿಕೆ ಆಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡದಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ.
ರಾಜಧಾನಿ ಬೆಂಗಳೂರಲ್ಲಿ ಭಾನುವಾರ ರಾತ್ರಿಯಿಡಿ ಸುರಿದ ಜಿಟಿಜಿಟಿ ಮಳೆಯಾಗಿದೆ. ಬೆಳಗ್ಗೆ 10 ಗಂಟೆಯಾದರೂ ಸೂರ್ಯನ ದರ್ಶನ ಇರಲಿಲ್ಲ. ಬೆಳಗ್ಗೆವರೆಗೂ ಜಿನುಗುತ್ತಿತ್ತು. ವರುಣನ ಅಬ್ಬರದಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದು, ಲಾಲ್‍ಬಾಗ್, ಜಯನಗರ, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಕುಮಾರಸ್ವಾಮಿ ಲೇ ಔಟ್, ಜೆಸಿ ರೋಡ್, ಕಾರ್ಪೊರೇಷನ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ರಾತ್ರಿ ಗುಡುಗು ಸಹಿತ ವರುಣ ಅಬ್ಬರಿಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.



