ಮೈಸೂರು: ಈ ಸಿಡಿ ಪ್ರಕರಣದಲ್ಲಿ ನನಗೆ ಬಂದಿರು ಮಾಹಿತಿ ಪ್ರಕಾಣ 5 ಕೋಟಿ ವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ ರಾಜ್ಯದಲ್ಲಿ ಸಿಡಿ ಪ್ರಕರಣ ಸಾಕಷ್ಟು ಸುದ್ದಿ ಮಾಡುತ್ತಿದ್ದು, ಹಲವು ಪ್ರಭಾವಿ ರಾಜಕಾರಣಿಗಳ ಸಿಡಿ ಇದೆ ಎಂಬ ಮಾತು ಕೇಳಿಬರುತ್ತಿದೆ. ಈ ವಿಚಾರವಾಗಿ ಮೊದಲು ಈ ಬ್ಲಾಕ್ ಮೇಲ್ ಮಾಡುತ್ತಿರುವವರನ್ನು ಬಂಧಿಸಿ ಸಿಡಿ ವಶಪಡಿಸಿಕೊಳ್ಳಬೇಕು ಎಂದಿದ್ದಾರೆ.
ರಮೇಶ್ ಜಾರಕಿಹೊಳಿಯವರನ್ನು ಮಂತ್ರಿಪದವಿಯಿಂದ ಕೆಳಗಿಳಿಸಬೇಕು ಎಂಬ ಉದ್ದೇಶದಿಂದಲೇ ಹೀಗೆ ಮಾಡಿದ್ದರು. ಅದರಲ್ಲಿ ಅವರು ಸಫಲರಾಗಿದ್ದಾರೆ. ಈ ಸಿಡಿ ಪ್ರಕರಣದಲ್ಲಿ 5 ಕೋಟಿ ವ್ಯವಹಾರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಮಗ್ರವಾಗಿ ತನಿಖೆ ನಡೆಯಬೇಕು ಎಂದರು.
ಜಾರಕಿಹೊಳಿ ಸಿಡಿ ಬಳಿಕ ಇನ್ನೂ ಹಲವು ಪ್ರಭಾವಿ ರಾಜಕಾರಣಿಗಳ, ಮಾಜಿ ಸಿಎಂ ಗಳ ಸಿಡಿ ಇದೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮೊದಲು ಆ ಬ್ಲಾಕ್ ಮೇಲ್ ವ್ಯಕ್ತಿಗಳನ್ನು ಬಂಧಿಸಿ ಅವರಿಂದ ಮಾಹಿತಿ ಪಡೆದು ರಾಜ್ಯ ಸರ್ಕಾರವೇ ಎಲ್ಲಾ ಮಾಹಿತಿಗಳನ್ನು ರಾಜ್ಯದ ಜನತೆ ಮುಂದೆ ಇಡಬೇಕು. ಅಲ್ಲದೇ ಮಾಜಿ ಸಿಎಂ ಗಳ ಸಿಡಿ ಇದೆ ಎನ್ನಲಾಗುತ್ತಿದೆ. ಆ ಮಾಜಿ ಸಿಎಂ ಗಳು ಯಾರು ಎಂಬುದು ಬಹಿರಂಗವಾಗಲಿ. ಇಂದು ರಾಜಕೀಯ ಕಲುಷಿತವಾಗಿದೆ. ಇಂಥಾ ಕೇಸ್ ನಿಂದಾಗಿ ಜನರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆ ಎಂದು ಹೇಳಿದರು.



