ಬೆಂಗಳೂರು: ನೈಋತ್ಯ ಮುಂಗಾರು ಕೇರಳ ರಾಜ್ಯಕ್ಕೆ ಎಂಟ್ರಿ ಕೊಟ್ಟ ಎರಡು ದಿನಗಳ ನಂತರ ಇಂದು (ಜೂನ್ 10) ಅಥವಾ ಜೂ.11ರಂದು ಕರ್ನಾಟಕಕ್ಕೆ ಪ್ರವೇಶಿಸುವ ಸಾಧ್ಯತೆ. ರಾಜ್ಯದಲ್ಲಿ ಇಂದಿನಿಂದ ಐದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಸಾಧ್ಯತೆಯಿದೆ. ಬಿಫರ್ ಜಾಯ್ ಸೈಕ್ಲೋನ್ ಎಫೆಕ್ಟ್ನಿಂದಾಗಿ ಭಾರೀ ಮಳೆಯಾಗುತ್ತದೆ.ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಯಾಗಲಿದೆ.
ಈ ವರ್ಷ ಜೂನ್ 4 ರ ವೇಳೆಗೆ ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿತ್ತು. 4 ದಿನ ತಡವಾಗಿ ಆಗಮಿಸಿದ್ದು, ಇದರಿಂದ ರಾಜ್ಯದಲ್ಲಿಯೂ ಮುಂಗಾರು ವಿಳಂಬವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಮಾರುತಗಳನ್ನು ಸಮುದ್ರ ಮಟ್ಟದಿಂದ 4.5 ಕಿಮೀ ಎತ್ತರದಲ್ಲಿ ನೋಡಬೇಕು. ಅವುಗಳ ವೇಗವು 15-20 ಕಿಲೋ ಮೀಟರ್ ಗಳಾಗಬೇಕಿದ್ದು ಜೂನ್ 6ರವರೆಗೆ ಬಂದಿರಲಿಲ್ಲ . ಕೇರಳದಲ್ಲಿ ನಾವು ಹೊಂದಿರುವ 14 ಮೇಲ್ವಿಚಾರಣಾ ಕೇಂದ್ರಗಳ ಪೈಕಿ, ಕನಿಷ್ಠ ಎಂಟರಿಂದ ಒಂಬತ್ತು ಕೇಂದ್ರಗಳಲ್ಲಿ ಎರಡು ದಿನಗಳ ಕಾಲ ನಿರಂತರವಾಗಿ ಕನಿಷ್ಠ 2.5 ಮಿಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.



