ಬೀದರ್ : ಕೆಲಸಕ್ಕೆ ಹಾಜರಾಗದ ಸಾರಿಗೆ ಸಿಬ್ಬಂದಿಗಳ ವೇತನವನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ. ಮುಂದಿನ ದಿನಲ್ಲಿ ಇನ್ನಷ್ಟು ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಬೇಕು. ಹಬ್ಬಗಳ ಸಮಯದಲ್ಲಿ ಸಾರಿಗೆ ಸಿಬ್ಬಂದಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಪ್ರತಿಭಟನೆ ಮಾಡುವವವರ ವಿರುದ್ಧ ಕ್ರಮ ಅನಿವಾರ್ಯವಾಗುತ್ತದೆ ಎಂದರು.
ಯಾರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲಾಗಿದೆ. ಕಷ್ಟ ಸಮಯದಲ್ಲೂ 2,300 ಕೋಟಿ ರೂ. ಸಂಬಳವನ್ನು ಸರ್ಕಾರದಿಂದ ಕೊಡಲಾಗಿದ್ದು, ಅಗತ್ಯ ಸಹಕಾರವನ್ನು ಸಹ ನೀಡಲಾಗಿದೆ. ಯಾರದ್ದೋ ಮಾತು ಕೇಳಿಕೊಂಡು ಮುಷ್ಕರ ಮಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.