2021-22ನೇ ಸಾಲಿನಲ್ಲಿ ಮೆಣಸಿನಕಾಯಿ ಬೆಳೆಯ ಮೇಲೆ ಕಪ್ಪು ಬಣ್ಣದ ತ್ರಿಪ್ಸ್ ಹಾವಳಿಯು ತೀವ್ರತರವಾಗಿದ್ದು, 2022-23 ನೇ ಸಾಲಿನಲ್ಲಿಯೂ ಈ ಕೀಟದ ಹಾವಳಿ ತುಂಬಾ ಜಾಸ್ತಿ ಇರಬಹುದೆಂದು ಅಂದಾಜಿಸಲಾಗಿದೆ. 2021-22ನೇ ಸಾಲಿನಲ್ಲಿ ಅಂದರೆ ಹಿಂದಿನ ಸಾಲಿನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದಲ್ಲಿ ಈ ಬಾರಿ ಬದಲಿ ಬೇರೆ ಬೆಳೆಯನ್ನು ಬೆಳೆಯುವುದು ಅಥವಾ ಮೆಣಸಿನಕಾಯಿ ಬೆಳೆಯಲು ಇಚ್ಫಿಸಿದಲ್ಲಿ 0.75*0.45ಮೀ. ಅಂತರದಲ್ಲಿ ಪ್ರತಿ ಎಕರೆಗೆ 11ಸಾವಿರದಿಂದ 11800 ರವರೆಗೆ ಗಿಡಗಳನ್ನು ಮಾತ್ರ ನಾಟಿ ಮಾಡಬೇಕು.
ಮೆಣಸಿನಕಾಯಿ ಬೆಳೆಯಲ್ಲಿ ರೋಗ ಹಾಗೂ ಕೀಟ ತಡೆಯಲು ಮೆಕ್ಕೆಜೋಳ, ಜೋಳ, ಸಜ್ಜೆ ಬೆಳೆಗಳನ್ನು ತಡೆ ಬೆಳೆಯಾಗಿ ಬೆಳೆಯಬೇಕು. ಮೆಣಸಿನಕಾಯಿ ಬೆಳೆಯ ಸುತ್ತ ಅಥವಾ 8ರಿಂದ 10 ಸಾಲುಗಳಿಗೆ ಒಂದು ಸಾಲು ಸಜ್ಜೆ, ತೊಗರಿ, ಮೆಕ್ಕೆಜೋಳ ಬೆಳೆಯಬೇಕು. ಕೆಲವು ಮೆಣಸಿನಕಾಯಿ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕುಂದುತ್ತಿರುವುದು ಇಳುವರಿಯಲ್ಲಿ ವ್ಯತ್ಯಾಸವಾಗಬಹುದಾಗಿರುತ್ತದೆ ಈ ಕುರಿತು ಎಚ್ಚರಿಕೆ ವಹಿಸುವುದು ಸೂಕ್ತ. ನಿಗಧಿತ ಅವಧಿಯಲ್ಲಿ ಸಮುದಾಯವಾರು ಸಿಂಪರಣೆ ಮಾಡಿದಲ್ಲಿ ಮಾತ್ರ ರೋಗ ಮತ್ತು ಕೀಟದ ಹಾವಳಿ ತಗ್ಗಿಸಬಹುದಾಗಿದೆ.
ರೋಗ ಮತ್ತು ಕೀಟ ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ Prophylactic control measures ಗಳನ್ನು ಅನುಸರಿಸಬೇಕು.
ಮೆಣಸಿನಕಾಯಿ ಬೆಳೆಗೆ ಪರ್ಯಾಯವಾಗಿ ಇತರೆ ಬೆಳೆಗಳನ್ನು ಸಹ ಬೆಳೆಯಬಹುದು. 2021-22 ನೇ ಸಾಲಿನ ನವೆಂಬರ್ ಮಾಹೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಬೆಳೆ ತೀವ್ರಹಾನಿ ಉಂಟಾದ ಕಾರಣ ಶೇ.80ರಷ್ಟು ನಷ್ಟ ಉಂಟಾಗಿರುವ ಕಾರಣ ಏಕ ಬೆಳೆ ಪದ್ದತಿ ಬದಲಾಗಿ ಮಿಶ್ರ ಬೆಳೆ ಪದ್ಧತಿಗೆ ಆದ್ಯತೆ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.



