ದಾವಣಗೆರೆ: ರೈತರು, ಸಹಕಾರಿ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ಸರ್ಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ಇಂದಿನಿಂದ ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿ ಆರಂಭವಾಗಲಿದೆ.
ಸಹಕಾರ ಇಲಾಖೆಯು 2022-23 ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ. ನವೆಂಬರ್ 14 ರ ರೊಳಗಾಗಿ ಅರ್ಹರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆ ಜನವರಿ 1 ರಿಂದ ಜಾರಿಗೆ ಬರಲಿದ್ದು, ರಾಜ್ಯದ ಸಹಕಾರ ಸಂಘಗಳ ಸದಸ್ಯರು ಹಾಗೂ ರೈತ ಕುಟುಂಬ ಸದಸ್ಯರಿಗೆ ಯಶಸ್ವಿನಿ ಯೋಜನೆಯ ಲಾಭ ದೊರೆಯಲಿದೆ.ರಾಜ್ಯದ ಸಹಕಾರಿ ಸಂಘದ ಸದಸ್ಯರು ತಮ್ಮ ಸಹಕಾರಿ ಸಂಘಗಳ ಮೂಲಕ ನಿಗದಿತ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು.
ನೋಂದಣಿ ಮಾಡಿಕೊಂಡ ನಂತರ ಸಹಕಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಯಶಸ್ವಿನಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಯಾವುದೇ ಆಸ್ಪತ್ರೆಯಲ್ಲಿ ವಾರ್ಷಿಕ ಗರಿಷ್ಠ 5 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆಯಬಹುದು. ಸದಸ್ಯರಿಗೆ 2023 ರ ಜನವರಿ 1 ರಿಂದ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿ ನಂತರ ಮತ್ತೆ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.



