ದಾವಣಗೆರೆ : ಕುಂದವಾಡ ಕೆರೆಯು ದಾವಣಗೆರೆ ನಗರದ ಕುಡಿಯುವ ನೀರಿನ ಪ್ರಮುಖ ಸಂಗ್ರಹಗಾರವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಜನರಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಹಾಗೂ ಕೆರೆಯ ಸುತ್ತಮುತ್ತಲ ಪ್ರದೇಶದ ಜೀವವೈವಿಧ್ಯಗಳ ವಿಕಸನಕ್ಕೆ ಹಾನಿಯಾಗದಂತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಾಸ್ತವಾಂಶಗಳನ್ನು ಸಾರ್ವಜನಿಕರಿಗೆ ತಲುಪುವ ದಿಸೆಯಲ್ಲಿ ಜನಜಾಗೃತಿ ಮೂಡಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಿಟಿ ಲೆವೆಲ್ ಅಡೈಸರಿ ಫೋರಂ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವರು ವಾಸ್ತವ ಸಂಗತಿಗಳನ್ನು ಅರಿಯದೆ, ಕುಂದವಾಡ ಕೆರೆ ಅಭಿವೃದ್ಧಿ ಯೋಜನೆಯು ಪರಿಸರ ವಿರೋಧಿಯೆಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಂದವಾಡ ಕೆರೆ ಪ್ರಸ್ತುತ ಕೇವಲ ಕೆರೆ ಮಾತ್ರವಲ್ಲದೆ, ನಗರಕ್ಕೆ ಕುಡಿಯುವ ನೀರಿಗೆ ಆಧಾರವಾಗಿರುವ ಪ್ರಮುಖ ನೀರು ಸಂಗ್ರಹಗಾರವಾಗಿದೆ. ಅಧಿಕಾರಿಗಳು ಕುಂದವಾಡ ಕೆರೆ ಅಭಿವೃದ್ಧಿಯ ಉದ್ದೇಶ ಕುರಿತ ವಾಸ್ತವ ಅಂಶಗಳನ್ನು ಸರಿಯಾದ ರೀತಿಯಲ್ಲಿ ಪ್ರಚುರಪಡಿಸಬೇಕು.ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಜನಜಾಗೃತಿ ಮೂಡಿಸಿ ಎಂದು ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ಬೇಸಿಗೆಯಲ್ಲಿ ಕೆರೆ ಏರಿ ಮೇಲಿನ ಕಳೆ, ಗಿಡಗಂಟೆ ಇತ್ಯಾದಿಗಳ ಕೊಳೆಯುವಿಕೆಯಿಂದ ನೀರು ಹಸಿರುಗಟ್ಟಿ ಕುಡಿಯಲು ಯೋಗವಾಗದ ರೀತಿ ಪರಿವರ್ತನೆಯಾಗುತ್ತದೆ, ನೀರು ಕಲುಷಿತಗೊಳ್ಳುವುದರಿಂದ ಕೆರೆಯಲ್ಲಿನ ಮೀನುಗಳು, ಜೀವವೈವಿಧ್ಯಗಳು ಸಾಯುತ್ತವೆ. ಇದನ್ನು ಈ ಹಿಂದೆಯೂ ಗಮನಿಸಲಾಗಿದೆ. ಕೆರೆಯ ಏರಿಯಲ್ಲಿನ ನೀರು ಬಸಿಯುವಿಕೆ, ಹಾಳಾಗಿರುವ ಏರಿ ಮೇಲಿನ ಕಲ್ಲುಹೊದಿಕೆ ಮುಂತಾದ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕೆರೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, ಒಂದೂವರೆ ವರ್ಷದ ಹಿಂದೆಯೇ ಕಾಮಗಾರಿಗೆ ಆದೇಶ ನೀಡಲಾಗಿದೆ ಎಂದರು.
ಸಾರ್ವಜನಿಕರ ಅನುಕೂಲಕ್ಕೆ ಏರಿಯ ಮೇಲೆ ವಿದ್ಯುತ್ ದೀಪ ಅಳವಡಿಕೆ, ಹೂವಿನ ಗಿಡಗಳನ್ನು ಹಾಕುವುದು, ಕಲ್ಲು ಬೆಂಚು ಅಳವಡಿಕೆ, ವಾಕಿಂಗ್ ಪಾಥ್, ಸೈಕಲ್ ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಕೆರೆಯ ಒಳಗೆ ಸಾರ್ವಜನಿಕರು ಹಾಗೂ ಪ್ರಾಣಿಗಳು ಹೋಗದಂತೆ ಚೈನ್ ಲಿಂಕ್ ತಂತಿ ಬೇಲಿ ಅಳವಡಿಸಲು ಉದ್ದೇಶಿಸಲಾಗಿದೆ. ಈ ಕೆರೆಗೆ ಯಾವುದೇ ಮಳೆ ನೀರಿನ ಒಳಹರಿವು ಇಲ್ಲದಿರುವುದರಿಂದ, ತುಂಗಭದ್ರಾ ನದಿ ಮತ್ತು ಭದ್ರಾ ಕಾಲುವೆ ಮೂಲಕ ಹರಿಸಿ ತುಂಬಿಸಲಾಗುತ್ತಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಯ ವಿಷಯವಾಗಿರುವುದರಿಂದ, ಕೆರೆಯಲ್ಲಿ ಸ್ವಚ್ಛ ಪರಿಸರ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸತ್ಯಾಂಶಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆ ಮಹಾಪೌರ ಅಜಯ್ಕುಮಾರ್, ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಸಿಟಿ ಲೆವೆಲ್ ಅಡೈಸರಿ ಫೋರಂ ಸದಸ್ಯರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಇಂಜಿನಿಯರ್ಗಳು ಉಪಸ್ಥಿತರಿದ್ದರು.