ದಾವಣಗೆರೆ : ಕಲ್ಲುಗಣಿ, ಕ್ರಷರ್ ಮಾಲೀಕರು ಕಾನೂನಿನ ಚೌಕಟ್ಟಿನೊಳಗೆ ಚಟುವಟಿಕೆ ನಡೆಸಬೇಕು. ಪರವಾನಗಿ ಇಲ್ಲಿದವರು ಪಡೆಯಬೇಕು. ಆದರೆ ಕಾನೂನು ಮೀರಿ ನಡೆದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಲುಗಣಿ ಮತ್ತು ಕ್ರಷರ್‍ಗಳಿಗೆ ಲೈಸೆನ್ಸ್ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮಾರ್ಗದರ್ಶನ ನೀಡುವರು. ಎಸ್‍ಪಿ ಹಾಗೂ ಡಿಸಿ ಕಚೇರಿಗಳ ಸಹಕಾರ ಕೂಡ ಇದ್ದು, ಆದಷ್ಟು ಬೇಗ ಮಾಲೀಕರು ಲೈಸೆನ್ಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಅನಧಿಕೃತ ಕ್ವಾರಿಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಂಡವೊಂದನ್ನು ರಚಿಸಿ, ಆ ವರದಿಯನ್ವಯ ಶಿಸ್ತಿನ ಕ್ರಮ ವಹಿಸಲಾಗುವುದು.
ಜಿಲ್ಲೆಯಲ್ಲಿ ಒಟ್ಟು 58 ಕ್ರಷರ್‍ಗಳಿವೆ. ಹಾಗೂ 78 ಕಲ್ಲುಗಣಿಗಳಿವೆ. 78 ಕ್ವಾರಿಗಳ ಪೈಕಿ 10 ಮಾತ್ರ ಬ್ಲಾಸ್ಟಿಂಗ್ ಲೈಸೆನ್ಸ್ ಪಡೆದಿದ್ದು, 18 ಪ್ರಗತಿಯಲ್ಲಿವೆ. 07 ನವೀಕರಣ ಪ್ರಕ್ರಿಯೆಯಲ್ಲಿದ್ದರೆ 7 ಮ್ಯಾನುವಲ್ ಮತ್ತು 36 ಕ್ವಾರಿಗಳಲ್ಲಿ ಕೆಲಸ ನಡೆಯುತ್ತಿಲ್ಲವೆಂದು ಗಣಿ ಇಲಾಖೆ ವರದಿ ನೀಡಿದೆ.
ಬ್ಲಾಸ್ಟಿಂಗ್ ಲೈಸೆನ್ಸ್ ಪಡೆದರೂ ಕೂಡ ಕ್ವಾರಿಗಳ ಚಟುವಟಿಕೆ ನಿಯಂತ್ರಿತ ಚಟುವಟಿಕೆಯಾಗಿದೆ. ಹಾಗೂ 2008 ರ ಸ್ಪೋಟಕ ನಿಯಮಾವಳಿಗಳ ಪ್ರಕಾರವೇ ಕ್ವಾರಿ ಕಾರ್ಯ ನಡೆಸಬೇಕು. ನಿಯಮವನ್ನು ಗಾಳಿಗೆ ತೂರುವ ಮನೋಭಾವ ಬಿಡಬೇಕು. ಅಭಿವೃದ್ದಿ ಜೊತೆಗೆ ನಿಯಮಗಳನ್ನು ಪಾಲಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ಒಂದು ವಾರದೊಳಗೆ ವರದಿ ನೀಡಲು ಗಡವು: ಕ್ವಾರಿಗಳಿರುವ ವ್ಯಾಪ್ತಿಯ ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಆರ್‍ಐ ಮತ್ತು ವಿಎ ಸೇರಿದಂತೆ ತಂಡ ರಚಿಸಿ ಗಣಿ ಇಲಾಖೆಯ ವರದಿಯಲ್ಲಿರುವಂತೆ ಕ್ವಾರಿಗಳು ಕೆಲಸ ನಿರ್ವಹಿಸುತ್ತಿವೆಯೇ? ಮುಖ್ಯವಾಗಿ ಕೆಲಸ ನಿಲ್ಲಿಸಿರುವ(ಐಡಲ್) ಕ್ವಾರಿಗಳ ಸ್ಥಿತಿಗತಿ ಏನು ಎಂಬ ಬಗ್ಗೆ ಒಂದು ವಾರದೊಳಗೆ ನನಗೆ ವರದಿ ನೀಡಬೇಕು. ಈ ವರದಿಯನ್ನು ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು. ಒಂದು ಪಕ್ಷ ಅನಧಿಕೃತವಾಗಿ ಕ್ವಾರಿ ನಡೆಸುತ್ತಿದ್ದರೆ ಹಾಗೂ ಕಾಯ್ದೆಯನ್ವಯ ನಿಯಮಗಳನ್ನು ಅನುಸರಿಸದೇ ಕ್ವಾರಿ ನಡೆಸುತ್ತಿದ್ದರೆ ಅಂತಹ ಕ್ವಾರಿಗಳಿಗೆ ನೋಟಿಸ್ ನೀಡಿ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಪರಿಸರಾಧಿಕಾರಿಗಳು ಕ್ವಾರಿಗಳಿಗೆ ಭೇಟಿ ನೀಡಿ ಪರಿಸರ ಮಾಲಿನ್ಯ ನಿಯಂತ್ರಣಾ ಕ್ರಮ ಕೈಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಪಿಪಿಟಿ ಪ್ರದರ್ಶನದ ಮೂಲಕ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಎಕ್ಸ್‍ಪ್ಲೋಸಿವ್ ಕಾಯ್ದೆ, ಸಬ್ಸ್‍ಟೆನ್ಸ್ ಕಾಯ್ದೆ ಹಾಗೂ ಎಕ್ಸ್‍ಪ್ಲೋಸಿವ್ ರೂಲ್ಸ್ 2008 ರ ಬಗ್ಗೆ ವಿವರವಾಗಿ ತಿಳಿಸುತ್ತಾ, ಮಾಲೀಕರು ಕಡ್ಡಾಯವಾಗಿ ಅನುಸರಿಸಬೇಕಾದ ಸುರಕ್ಷತಾ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ ಅವರು ಶಿವಮೊಗ್ಗದ ಹುಣಸೋಡಿನಲ್ಲಿ ಸ್ಫೋಟ ಸಂಭವಿಸಲು ಕಾರಣ ಇದ್ಯಾವ ನಿಯಮಗಳನ್ನು ಪಾಲಿಸದೇ ಇರುವುದಾಗಿದ್ದು, ಸ್ಪೋಟಕಗಳ ಬಳಕೆಯಲ್ಲಿ ನಿರ್ಲಕ್ಷ್ಯದಿಂದಾಗಿ ಸಾವುನೋವಿಗೆ ಕಾರಣವಾಗಿದ್ದು, ಈ ಪ್ರಕರಣದ ಕುರಿತು ತನಿಖೆ ಜಾರಿಯಲ್ಲಿದೆ ಎಂದರು.
ದಾವಣಗೆರೆ ನಗರದಲ್ಲಿಯೇ ದುಗ್ಗಮ್ಮನ ಜಾತ್ರೆ ತರುವಾಯ ದೇವಸ್ಥಾನದ ಸುಮಾರು 300 ಮೀಟರ್ ಅಂತರದಲ್ಲಿ ಹಂಚಿನ ಗೋದಾಮುವೊಂದರಲ್ಲಿ ದೊಡ್ಡ ಪ್ರಮಾಣದ ಸ್ಪೋಟಕವನ್ನು ಸಂಗ್ರಹಿಸಿರುವುದನ್ನು ಪತ್ತೆ ಹಚ್ಚಿ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ಆಜಾದ್ ನಗರದ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಸಂಗ್ರಹಿಸಿಡಲಾಗಿದ್ದ ಸ್ಪೋಟಕವನ್ನು ಸೀಜ್ ಮಾಡಿ ಸಂಬಂಧಿಸಿದವರನ್ನು ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಲೈಸೆನ್ಸ್‍ನ್ನು ಕೂಡ ನಿಯಮಾನುಸಾರ ನಿಲಂಬನೆಯಲ್ಲಿಡಲಾಗಿದೆ. ಕಾಡಜ್ಜಿ ಬಳಿ ಕೂಡ ಸ್ಪೋಟಕ ಸೀಜ್ ಮಾಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ ಎಂದ ಅವರು ಸ್ಪೋಟಕಗಳ ಬಗ್ಗೆ ಅತಿ ಜಾಗರೂಕರಾಗಿ ನಿಯಮ ಪಾಲಿಸದಿದ್ದರೆ ಅವಘಡಕ್ಕೆ ಕಾರಣರಾಗುತ್ತೀರೆಂದು ಎಚ್ಚರಿಕೆ ನೀಡಿದರು.
ಗುತ್ತಿಗೆದಾರರು ವಾಹನಗಳು ಭಾರ ಹೊರುವ ಕುರಿತಂತೆ ಆರ್ ಟಿ ಒ ಕಚೇರಿಯಿಂದ ನೀಡುವ ಪರ್‍ಮಿಟ್ ಹೊಂದಿರಬೇಕು. ಸಾಗಣಿಕೆಯ ವಾಹನದಲ್ಲಿ ಹೆಚ್ಚುವರಿ ಭಾರವನ್ನು ಹೇರುವಂತಿಲ್ಲ. ಈ ರೀತಿ ಮಾಡಿದರೆ ರಸ್ತೆ, ಪಾದಚಾರಿಗಳು, ವಾಹನ ಚಾಲಕರು ಸೇರಿದಂತೆ ಎಲ್ಲರಿಗೆ ತೊಂದರೆಯಾಗುವ ಕಾರಣ ಹೆಚ್ಚುವರಿ ಲೋಡ್ ಹಾಕಬಾರದು ಎಂದರು.
ಗಣಿ ಮಾಡುವ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆ ಕಡ್ಡಾಯ. ಗಣಿಗಾರಿಕೆ ಪ್ರದೇಶದ ಪ್ರವೇಶ, ನಿರ್ಗಮನ, ಗಣಿ ಸ್ಥಳ, ಸ್ಟೋರೇಜ್ ಪ್ರದೇಶಗಳಲ್ಲಿ ಸಿಸಿ ಟಿವಿ ಅಳವಡಿಸಬೇಕು. ಸಿಸಿಟಿವಿ ಅಳವಡಿಕೆಯಿಂದ ಸ್ಥಳದಲ್ಲಿ ಏನಾದರೂ ದುರ್ಘಟನೆಗಳು ಸಂಭವಿಸಿದರೆ ಪೊಲೀಸರಿಗೆ ತನಿಖೆ ನಡೆಸಲು ಅನುಕೂಲ. ಕರ್ನಾಟಕ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅನ್ವಯ ಎಲ್ಲೆಡೆ ಸಿಸಿಟಿವಿ ಅಳವಡಿಸಬೇಕು. ಸಿಸಿಟಿವಿಯ ಸಹಾಯದಿಂದ ನಡೆದ ಘಟನೆಗಳ ಬಗ್ಗೆ ಸಂರ್ಪೂಣವಾದ ಮಾಹಿತಿ ಹಾಗೂ ತನಿಖೆಗೆ ಬೇಕಾದ ಮೂಲಗಳನ್ನು ಪಡೆಯಬಹುದು. ಕೇವಲ ಕ್ವಾರಿಯಲ್ಲಿ ಮಾತ್ರವಲ್ಲದೇ, ಆಫೀಸ್, ಮನೆ, ದೇವಸ್ಥಾನಗಳಲ್ಲಿಯೂ ಕೂಡ ಸಿಸಿಟಿವಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಸದ್ಯಕ್ಕೆ ಲೈಸೆನ್ಸ್ ಇಲ್ಲದವರ ಚಟುವಟಿಕೆಯನ್ನು ಗಣಿ ಇಲಾಖೆಯಿಂದ ನಿಲ್ಲಿಸಲಾಗಿದ್ದು, ಲೈಸೆನ್ಸ್ ಪಡೆದ ನಂತರವೇ ತಮ್ಮ ಚಟುವಟಿಕೆ ಆರಂಭಿಸಬೇಕು. ಲೈಸೆನ್ಸ್ ಪಡೆಯಲು ಅಗತ್ಯವಾದ ಎನ್‍ಓಸಿ ಯನ್ನು ಎಸ್‍ಪಿ ಮತ್ತು ಡಿಸಿ ಕಚೇರಿಯಿಂದ ವಿಳಂಬವಿಲ್ಲದೇ ತಕ್ಷಣ ನೀಡಲಾಗುವುದು. ಹಾಗೂ ಗಣಿ ಇಲಾಖೆ ಲೈಸೆನ್ಸ್ ಪಡೆಯುವ ಕುರಿತು ಮಾರ್ಗದರ್ಶನ ಮಾಡುವುದು. ಮಾಲೀಕರೆಲ್ಲ ಸೇರಿ ಒಂದು ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಮಾಹಿತಿ ಹಂಚಿಕೆ ಮತ್ತು ಇತರೆ ಸಹಕಾರ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಸಂಪರ್ಕದಲ್ಲಿದ್ದು ನಿಯಮಗಳನ್ನು ಅನುಸರಿಸಬೇಕು ಎಂದರು.\
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಅವಘಡ ಎಲ್ಲಿಯಾದರೂ ಸಂಭವಿಸಬಹುದು. ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಸ್ಫೋಟಕ ಅವಘಡದಲ್ಲಿ ಎಕ್ಸ್‍ಪ್ಲೋಸಿವ್ ರೂಲ್ಸ್ ಹಾಗೂ ಎಕ್ಸ್‍ಪ್ಲೋಸಿವ್ ಕಾಯ್ದೆಯ ನಿಯಮಾವಳಿಗಳನ್ನು ಎಲ್ಲೂ ಅನುಸರಿಸಿಲ್ಲ. ಎಲ್ಲ ನಿಯಮಾವಳಿ ಗಾಳಿಗೆ ತೂರಿದ ಕಾರಣ ಆ ದುರಂತ ಸಂಭವಿಸಿದ್ದು, ಸ್ಪೋಟಕ ತುಂಬಿದ ವಾಹನಗಳು ಚಿತ್ರದುರ್ಗ-ದಾವಣಗೆರೆ ಮೂಲಕ ಹೆಬ್ಬಾಳು ಟೋಲ್‍ನಲ್ಲಿ ಹಾದು ಹೋಗಿವೆ. ಸ್ಪೋಟಕ ವಾಹನಗಳ ನಡುವಿನ ಅಂತರ ಕೂಡ ನಿರ್ವಹಿಸಲಾಗಿಲ್ಲ. ಜೊತೆ ಜೊತೆಗೇ ತೆರಳಿವೆ. ಅಕಸ್ಮಾತ್ ಇಲ್ಲಿ ಸ್ಪೋಟ ಆಗಿದ್ದರೂ ಯತೇಚ್ಚವಾಗಿ ಹಾನಿಯಾಗುತ್ತಿತ್ತು.ಲೈಸೆನ್ಸ್ ಪಡೆದ ಮಾಲೀಕರು ಸ್ಫೋಟಕ್ಕೂ ಮುನ್ನ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಗಮನಕ್ಕೆ ತರಬೇಕು. ಪೊಲೀಸರ ಸಮ್ಮುಖದಲ್ಲಿ ಸ್ಪೋಟ ನಡೆಯಬೇಕು ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಮಾತನಾಡಿ, ಈಗಾಗಲೇ ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಎರಡು ಬಾರಿ ಕ್ವಾರಿ ಮತ್ತು ಕ್ರಷರ್‍ಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗಿದೆ. ಕೆಲಸ ಮಾಡದೇ ಇರುವ ಐಡಲ್ ಕ್ವಾರಿಗಳಿಗೆ 30 ದಿನಗಳ ನೋಟಿಸ್ ನೋಡಿ ಅವಕಾಶ ನೀಡಲಾಗುವುದು. ಆದಾಗ್ಯೂ ಅವರು ಕ್ವಾರಿ ಕಾರ್ಯಾರಂಭಿಸದಿದ್ದರೆ ಕಲ್ಲುಗಣಿ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ನಮ್ಮ ಭೂವಿಜ್ಞಾನಿಗಳು ಮತ್ತು ಸಿಬ್ಬಂದಿ ಪ್ರತಿದಿನ ಕ್ವಾರಿಗಳಿಗೆ ತೆರಳಿ ಕಲ್ಲುಗಣಿ ಸುರಕ್ಷತೆ, ಗಡಿ ಪ್ರಾಂತ್ಯ, ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರೆ ನಿಯಮಾವಳಿಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ದಾವಣಗೆರೆ ಉಪವಿಭಾಗಾರಿ ಮಮತಾ ಹೊಸಗೌಡರ್, ತಾಲ್ಲೂಕುಗಳ ತಹಶೀಲ್ದಾರರು, ಡಿವೈಎಸ್‍ಪಿಗಳು, ಸಿಪಿಐ ಮತ್ತು ಇತರೆ ಸಿಬ್ಬಂದಿ ಹಾಗೂ ಕ್ರಷರ್ ಮತ್ತು ಕ್ವಾರಿಗಳ ಮಾಲೀಕರು ಹಾಜರಿದ್ದರು.