ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಸತ್ತ ಜೇಡರ ಹುಳ ಪತ್ತೆ; ಸೇವಾ ನ್ಯೂನ್ಯತೆ ಎಸಗಿದ ಬಿಸ್ಲೇರಿ ಕಂಪನಿಗೆ 60 ಸಾವಿರ ದಂಡ..!

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ಧಾರವಾಡ: ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಸತ್ತಿರುವ ಜೇಡರ ಹುಳ ಪತ್ತೆಯಾಗಿದೆ. ಈ ಬಗ್ಗೆ ಗ್ರಾಹಕರೊಬ್ಬರು ಗ್ರಾಹಕ ರಕ್ಷಣಾ ಕಾಯ್ದೆಯಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಕೊಟ್ಟಿದ್ದರು. ಈ ದೂರು ವಿಚಾರಣೆ ನಡೆಸಿದ ಆಯೋಗ, ದೂರುದಾರ ಕೊಟ್ಟ ರೂ.495 ಹಣದ ಜತೆ ಸೇವಾ ನ್ಯೂನ್ಯತೆಯಿಂದ ದೂರುದಾರನಿಗೆ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚವನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಸಂದಾಯ ಮಾಡುವಂತೆ ಬಿಸ್ಲೇರಿ ಕಂಪನಿ ಮತ್ತು ಮಸ್ಕಿಯ ಸಪ್ತಗಿರಿ ಇಂಡಸ್ಟ್ರೀಸ್ ರವರಿಗೆ ಆಯೋಗ ಆದೇಶಿಸಿದೆ.

ಹುಬ್ಬಳ್ಳಿಯ ಲಿಂಗರಾಜ ನಗರದ ದೇವೆಂದ್ರಪ್ಪ ಹೂಗಾರ ಹುಬ್ಬಳ್ಳಿಯ ಕ್ಲಬ್‍ರಸ್ತೆಯಲ್ಲಿ ಶ್ರೀ ರಾಘವೇಂದ್ರ ಜೂಸ್ ಹಾಗೂ ಐಸ್‍ಕ್ರೀಮ್ ಅಂಗಡಿಯನ್ನು ಸ್ವಯಂ ಉದ್ಯೋಗದ ಅಡಿ ನಡೆಸುತ್ತಿದ್ದರು. ಅವರು ತಮ್ಮ ಅಂಗಡಿಯಲ್ಲಿ ಬಿಸ್ಲೇರಿ ನೀರು, ಜೂಸ್ ಮತ್ತು ಐಸಕ್ರೀಮಗಳನ್ನು ಮಾರಾಟ ಮಾಡುತ್ತಿದ್ದರು. ಜನವರಿ 01 2023 ರಂದು ದೂರುದಾರ ಹಳೆ ಹುಬ್ಬಳ್ಳಿಯ ಆನಂದ ನಗರದ ಸಾಯಿ ಎಂಟರ ಪ್ರೈಸಸ್‍ರವರಿಂದ ರೂ.495 ಕೊಟ್ಟು ವಿವಿಧ ಬಗೆಯ ಬಿಸ್ಲೇರಿ ಬಾಟಲಿಗಳನ್ನು ಖರೀದಿಸಿದ್ದರು

ಆ ಬಾಕ್ಸ್ ತೆಗೆದು ನೋಡಿದಾಗ 1 ಲೀಟರಿನ ಬಿಸ್ಲೇರಿ ಬಾಟಲಿಯಲ್ಲಿ ಸತ್ತ ಮತ್ತು ಕೊಳೆತ ಜೇಡರ ಹುಳು ಇತ್ತು. ಆ ಬಾಟಲಿಯ ನೀರು ಸಹ ಪರಿಶುದ್ಧವಾಗಿಲ್ಲ ಕಾರಣ ಬಿಸ್ಲೇರಿ ನೀರಿನ ಬಾಟಲಿಯ ಉತ್ಪಾದಕರಾದ ಮಸ್ಕಿಯ ಸಪ್ತಗಿರಿ ಇಂಡಸ್ಟ್ರೀಸ್, ಮುಂಬೈ ಬಿಸ್ಲೇರಿ ಕಂಪನಿ ಹಾಗೂ ಹುಬ್ಬಳ್ಳಿಯ ಸಾಯಿ ಎಂಟರ ಪ್ರೈಸಸ್‍ರವರು ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಹೇಳಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ದೂರುದಾರರು ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:20/02/2023 ರಂದು ದೂರು ಸಲ್ಲಿಸಿದ್ದರು. ದೂರಿನ ಜೊತೆ ಆ ಬಿಸ್ಲೇರಿ ಬಾಟಲಿಯನ್ನು ಆಯೋಗ ಮುಂದೆ ಹಾಜರುಪಡಿಸಿದ್ದರು.

ದೂರುದಾರ ವ್ಯಾಪಾರಸ್ಥನಿದ್ದು ಅವನು ತನ್ನ ವ್ಯವಹಾರಕ್ಕಾಗಿ ಆ ಬಿಸ್ಲೇರಿ ಬಾಟಲಿಗಳನ್ನು ಖರೀದಿಸಿರುವುದರಿಂದ ಅವನು ಗ್ರಾಹಕನಾಗುವುದಿಲ್ಲ ಅಂತಾ 2 ಮತ್ತು 3ನೇ ಎದುರುದಾರರು ಆಕ್ಷೇಪಣೆ ಎತ್ತಿದ್ದರು. ಅಲ್ಲದೇ ತಾವು ಅಂತರಾಷ್ಟ್ರೀಯ ಖ್ಯಾತಿಯ ನೀರು ಬಾಟಲಿ ಉತ್ಪಾದಕರಿದ್ದು, ತಾವು ಪ್ರತಿ ಬಾಟಲಿ ನೀರನ್ನು ತಯಾರಿಸುವಾಗ ಆ ನೀರುಗಳ ಗುಣಮಟ್ಟ ಮತ್ತು ಪರಿಶುದ್ಧತೆಯ ಬಗ್ಗೆ ಪರಿಶೀಲಿಸಿ ಕಾಳಜಿವಹಿಸಿ ತಯಾರಿಸುವುದಾಗಿ ಮತ್ತು ತಮ್ಮಿಂದ ಯಾವುದೆ ಸೇವಾ ನ್ಯೂನ್ಯತೆ ಆಗಿಲ್ಲ ಅಂತಾ 2 ಮತ್ತು 3ನೇ ಎದುರುದಾರರು ಆಕ್ಷೇಪಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷ ಈಶಪ್ಪ ಭೂತೆ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೂರುದಾರ ಕಿರುಕುಳ ವ್ಯಾಪಾರಿ ಆಗಿದ್ದರೂ ಸಹ ಅವನು ತನ್ನ ಕುಟುಂಬ ನಿರ್ವಹಣೆಗಾಗಿ ಸ್ವಯಂ ಉದ್ಯೋಗ ನಡೆಸುತ್ತಿರುವುದರಿಂದ ಅವನು ಗ್ರಾಹಕನಾಗುತ್ತಾನೆ ಮತ್ತು ಬಿಸ್ಲೇರಿ ಕಂಪನಿಯವರು ಸೇವೆ ಒದಗಿಸುವವರಾಗುತ್ತಾರೆ ಅಂತಾ ಆಯೊಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ. ಆಯೋಗದ ಮುಂದೆ ಹಾಜರು ಮಾಡಿದ ಶೀಲು ಹೊಂದಿರುವ ಬಿಸ್ಲೇರಿ ನೀರಿನ ಬಾಟಲಿಯಲ್ಲಿ ಸತ್ತ ಮತ್ತು ಕೊಳೆತ ಜೇಡರ ಹುಳು ಇದೆ. ಅದರಲ್ಲಿರುವ ನೀರು ಕಲುಶಿತವಾಗಿರುತ್ತವೆ. ಕಾರಣ ಎದುರುದಾರರ ಆಕ್ಷೇಪಣೆಗಳನ್ನು ತಳ್ಳಿಹಾಕಿ ಅವರು ಕಳಪೆ ಗುಣಮಟ್ಟದ ನೀರು ಉತ್ಪಾದಿಸಿ ಸರಬರಾಜು ಮಾಡಿರುವುದರಿಂದ ಬಿಸ್ಲೇರಿ ಕಂಪನಿಯವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

ಬಿಸ್ಲೇರಿ ಬಾಟಲಿಗಳನ್ನು ಖರೀದಿಸಲು ದೂರುದಾರ ಕೊಟ್ಟ ರೂ.495 ಹಣವನ್ನು ಅವನಿಗೆ ಹಿಂತಿರುಗಿಸಬೇಕು ಮತ್ತು ಸೇವಾ ನ್ಯೂನ್ಯತೆಯಿಂದ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ದೂರುದಾರನಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಸಂದಾಯ ಮಾಡುವಂತೆ ಬಿಸ್ಲೇರಿ ಕಂಪನಿ ಮತ್ತು ಮಸ್ಕಿಯ ಸಪ್ತಗಿರಿ ಇಂಡಸ್ಟ್ರೀಸ್ ರವರಿಗೆ ಆಯೋಗ ಆದೇಶಿಸಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *