ಯಾದಗಿರಿ: ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದ ಬಟ್ಟೆ ಇಷ್ಟವಾಗದ ಕಾರಣ ಆರ್ಡರ್ ಕ್ಯಾನ್ಸಲ್ ಮಾಡಲು ಹೋಗಿ ವ್ಯಕ್ತಿಯೊಬ್ಬ 2 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ಯಾದಗಿರಿಯ ಗಣೇಶ ನಗರದ ನಿವಾಸಿ ನಾರಾಯಣ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ಧಾರೆ. ಫ್ಲಿಪ್ ಕಾರ್ಟ್ ನಲ್ಲಿ ಆರ್ಡರ್ ಕ್ಯಾನ್ಸಲ್ ಮಾಡಿದಾಗ ಖಾತೆಗೆ ಹಣ ಮರಳಿ ಬಾರದೆ ಇರುವುದರಿಂದ, ಗೂಗಲ್‍ನಲ್ಲಿ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ನಂಬರ್ ಹುಡುಕಿ ಕಾಲ್ ಮಾಡಿ ಎರಡು ಲಕ್ಷ ಕಳೆದುಕೊಂಡಿ್ದ್ದಾರೆ.
ಗೂಗಲ್ ನಲ್ಲಿ ಸಿಕ್ಕ ನಂಬರಿಗೆ ಕಾಲ್ ಮಾಡಿ ವಿಚಾರಿಸಿದಾಗ, ಅವರ ಬ್ಯಾಂಕಿಗೆ ಸಂಬಂಧಪಟ್ಟ ವಿಷಯಗಳನ್ನು ಕೇಳಿದ್ದಾರೆ. ಇದಕ್ಕೆ ನಾರಾಯಣರವರು ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಅವರ ಮೊಬೈಲಿಗೆ ಬಂದ ಓಟಿಪಿ ಸಹ ಹೇಳಿದ್ದಾರೆ. ಓಟಿಪಿ ಶೇರ್ ಆದ ತಕ್ಷಣ ನಾರಾಯಣ ಅವರ ಬ್ಯಾಂಕ್ ಖಾತೆಗೆ ಕನ್ನಹಾಕಿದ್ದ ಖದೀಮರು, ಅವರ ಖಾತೆಯಿಂದ ಸುಮಾರು ಎರಡು ಲಕ್ಷ ರೂಪಾಯಿ ಎತ್ತಿಕೊಂಡಿದ್ದಾರೆ.
ಹಣ ಕಟ್ ಆದ ಬಳಿಕ ಮತ್ತೆ ಆ ನಂಬರಿಗೆ ಕಾಲ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಮಗೆ ಆದ ಆನ್ ಲೈನ್ ಮೋಸದ ಬಗ್ಗೆ ನಾರಾಯಣ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



