ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಒಳಗೊಂಡ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ಇಂದು(ಫೆ.29) ಅಧಿಕೃತವಾಗಿ ಸ್ವೀಕರಿಸಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಸಿಎಂ ಸಿದ್ದರಾಮಯ್ಯನವರಿಗೆ ವರದಿ ಸಲ್ಲಿಸಿದರು.
ವರದಿಯ ಕೆಲವು ಅಂಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿವೆ. ಪ್ರಬಲ ಸಮುದಾಯಗಳಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ (ಅಹಿಂದ ವರ್ಗ) ಜನಸಂಖ್ಯೆಯೇ ಅಧಿಕ ಎಂದು ವರದಿಯಲ್ಲಿ ಉಲ್ಲೇಖಿತವಾಗಿದೆ ಎನ್ನಲಾಗಿದೆ. 6 ಕೋಟಿ ಕನ್ನಡಿಗರ ಸಮುದಾಯ ಅಂಕಿ-ಅಂಶ ಬಹಿರಂಗವಾಗಿದೆ. ಈ ವರದಿಯನ್ನು ಸರ್ಕಾರ ಸದನದಲ್ಲಿ ಮಂಡಿಸಿದ ನಂತರ ವರದಿ ಪೂರ್ಣ ವಿವರ ಲಭ್ಯವಾಗಲಿದೆ. ಲೋಕಸಭೆ ಹೊತ್ತಿನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆಯಾಗಿದ್ದು, ಆಡಳಿತ ಪಕ್ಷದ ನಾಯಕರೂ ಸಹ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. 400 ಪುಟದ ವರದಿ ಸಲ್ಲಿಕೆಯಾಗಿದೆ. ವರದಿ ತಯಾರಿಕೆಗೆ ಸರ್ಕಾರ 165 ಕೋಟಿ ಖರ್ಚು ಮಾಡಿದೆ.
ಯಾವ ಸಮುದಾಯಕ್ಕೆ ಎಷ್ಟನೇ ಸ್ಥಾನ?
ಪರಿಶಿಷ್ಟ ಜಾತಿ(ಎಸ್ಸಿ)- 1.08 ಕೋಟಿ
ಮುಸ್ಲಿಂ- 70 ಲಕ್ಷ ಜನಸಂಖ್ಯೆ
ಲಿಂಗಾಯತ- 65 ಲಕ್ಷ ಜನಸಂಖ್ಯೆ
ಒಕ್ಕಲಿಗ- 60 ಲಕ್ಷ ಜನಸಂಖ್ಯೆ
ಕುರುಬರು- 45 ಲಕ್ಷ ಜನಸಂಖ್ಯೆ
ಈಡಿಗ- 15 ಲಕ್ಷ ಜನಸಂಖ್ಯೆ
ಪರಿಶಿಷ್ಟ ಪಂಗಡ (ಎಸ್ಟಿ)- 40.45 ಲಕ್ಷ ಜನಸಂಖ್ಯೆ
ವಿಶ್ವಕರ್ಮ- 15
ಬೆಸ್ತ- 15 ಲಕ್ಷ
ಬ್ರಾಹ್ಮಣ- 14 ಲಕ್ಷ
ಗೊಲ್ಲ (ಯಾದವ) – 10 ಲಕ್ಷ
ಮಡಿವಾಳ ಸಮಾಜ – 6
ಅರೆ ಅಲೆಮಾರಿ – 6 ಲಕ್ಷ
ಕುಂಬಾರ – 5 ಲಕ್ಷ
ಸವಿತಾ ಸಮಾಜ – 5 ಲಕ್ಷ
ವರದಿಯ ಅನ್ವಯ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ ) ಸಮುದಾಯ ಅತಿ ಹೆಚ್ಚು ಜನಸಂಖ್ಯೆ (1.08 ಕೋಟಿ) ಹೊಂದಿದೆ. ಇದರೊಂದಿಗೆ ರಾಜ್ಯದ ದೊಡ್ಡ ಸಮುದಾಯಗಳಲ್ಲಿ ಪರಿಶಿಷ್ಟ ಜಾತಿ ಪ್ರಥಮ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮುಸ್ಲಿಂ ಸಮುದಾಯ ಇದೆ. ಇನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ ಎನ್ನಲಾಗಿದೆ.
ಒಟ್ಟು 5.98 ಕೋಟಿ ಜನ ಸಮೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ರಾಜ್ಯದಲ್ಲಿ ದಲಿತರೇ ಹೆಚ್ಚಾಗಿದ್ದು, ಕುರುಬ ಜನಾಂಗವೇ ಅತಿ ಹಿಂದುಳಿದ ಸಮುದಾಯವಾಗಿದೆ. ರಾಜ್ಯದ ಒಟ್ಟಾರೆ ಜನಸಂಖ್ಯೆ 5.98 ಕೋಟಿ. ಈ ಪೈಕಿ ಅಹಿಂದ ವರ್ಗದವರು 3.96 ಕೋಟಿಯಷ್ಟಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರರ ಸಂಖ್ಯೆ 1.87 ಕೋಟಿಯಷ್ಟಿದೆ. ಒಟ್ಟು 816 ಇತರ ಹಿಂದುಳಿದ ಜಾತಿಗಳೆಂದು ಗುರುತಿಸಲಾಗಿದೆ. ಒಟ್ಟು 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನು ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ.