ಬೆಂಗಳೂರು: 5 ಎಕರೆ ಜಮೀನು, ಬೈಕ್, ಟಿವಿ, ಫ್ರಿಡ್ಜ್ ಇದ್ದವರ ಬಿಪಿಎಲ್ ಕಾರ್ಡ್ ರದ್ದಾಗಲಿದೆ ಎನ್ನುವ ಹೇಳಿಕೆ ರಾಜ್ಯದಲ್ಲಿ ಸಂಚಲನ ಉಂಟು ಮಾಡಿತ್ತು. ಇಂತಹ ಹೇಳಿಕೆ ನೀಡಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಇಂದು ಉಲ್ಟಾ ಹೊಡೆದಿದ್ದು, ನಾನು ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ. ನಾನು ಆ ರೀತಿ ಹೇಳಿದ್ದಕ್ಕೆ ದಾಖಲೆ ಕೊಡಿ ಮಾಧ್ಯಮಗಳನ್ನೇ ಕೇಳಿದ್ದಾರೆ. ಶ್ರೀಮಂತರು BPL ಕಾರ್ಡ್ ಹೊಂದಿದ್ದರೆ ವಾಪಾಸ್ ನೀಡಿ; ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಡಿಸಿಗಳಿಗೆ ಸೂಚನೆ: ಸಿಎಂ ಯಡಿಯೂರಪ್ಪ
ಇಂದು ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಪಿಎಲ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ. ಯಡಿಯೂರಪ್ಪ ಸರ್ಕಾರ ರೈತರ ಮತ್ತು ಬಡವರ ಪರವಾಗಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿದೇ ಯಾವುದೇ ಹೊಸ ನಿಯಮ ಜಾರಿ ಮಾಡಿಲ್ಲ. 2017 ರಲ್ಲಿ ಇದ್ದ ನಿಯಮವನ್ನೇ ಜಾರಿ ಮಾಡುತ್ತೇವೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ರದ್ದು ಪಡಿಸುವ ಉದ್ದೇಶ ಇಲ್ಲ. ಎಲ್ಲಾ ಕಾರ್ಡ್ ಗಳು ಮುಂದುವರೆಯಲಿವೆ ಎಂದು ತಿಳಿಸಿದರು.
ಭಾನುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಐದು ಎಕರೆಗಿಂತ ಹೆಚ್ಚಿನ ಜಮೀನು, ಮನೆಯಲ್ಲಿ ಬೈಕ್, ಟೀವಿ, ಫ್ರಿಡ್ಜ್ ಇದ್ದವರ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು. ಇಂತಹ ಸೌಲಭ್ಯ ಹೊಂದಿದವರು ತಮ್ಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಮಾರ್ಚ್ ಅಂತ್ಯದ ವರೆಗೆ ಸಮಯವಿದೆ ಎಂದು ಹೇಳಿದ್ದರು.