ಚಿತ್ರದುರ್ಗ: ಬಿಜೆಪಿ ಪಕ್ಷದ ಕಾರ್ಯಕಾರಣಿ ಸಭೆ ಮುಗಿಸಿದ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಚಿತ್ರದುರ್ಗದ ಹಿರಿಯ ಶಾಸಕ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇಂದು ಸ್ಥಳೀಯ ನಾಯಕರನ್ನು ಭೇಟಿ ಮಾಡಿದ ಅವರು, ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ ಪಕ್ಷದಲ್ಲಿನ ಆಂತರಿಕ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ತಿಪ್ಪಾರೆಡ್ಡಿ ಪಕ್ಷದಲ್ಲಿ ಹಿರಿಯ ಬಿಜೆಪಿ ಮೂಲ ಶಾಸಕರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಹಿರಿಯ ಶಾಸಕರಾಗಿರುವ ತಿಪ್ಪಾರೆಡ್ಡಿಗೆ ಪ್ರತಿ ಸಲ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೂ ಸಚಿವ ಸ್ಥಾನ ಕೈ ತಪ್ಪಿ ಹೋಗುತ್ತಿದೆ. ಹೀಗಾಗಿ ಈ ಬಾರಿ ಸಂಪುಟ ವಿಸ್ತರಣೆಗೆ ಮುನ್ನ ಬಿಜೆಪಿ ಉಸ್ತುವಾರಿ ತಿಪ್ಪಾರೆಡ್ಡಿ ಮನೆಗೆ ಭೇಟಿ ನೀಡಿರುವುದು, ಈ ಬಾರಿ ವಿಸ್ತರಣೆಯಲ್ಲಿ ಸ್ಥಾನಮಾನ ಸಿಗುವ ಭರವಸೆ ಹುಟ್ಟಿ ಹಾಕಿದೆ.



