ಬೆಂಗಳೂರು: ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಹಾಗೂ ಇತರೆ ಸಂಸ್ಥೆಗಳು ಸೇರಿದಂತೆ ನಿಗಮ, ಮಂಡಳಿ, ಸಂಘ-ಸಂಸ್ಥೆ ಹೆಸರಲ್ಲಿ ಅನಧಿಕೃತ ಲಾಂಛನ ಅಳವಡಿಸಿದ ವಾಹನಗಳ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುವಂತೆ ಸಾರಿಗೆ ಇಲಾಖೆ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಮಾ. 16ರೊಳಗಾಗಿ ಸಂಬಂಧಿಸಿದಂತ ಮಾಹಿತಿಯನ್ನು ಸಲ್ಲಿಸಲು ಸೂಚಿಸಿದೆ.
ಹೈಕೋರ್ಟ್ ವಾಹನಗಳ ನೋಂದಣಿ ಫಲಕಗಳ ಮೇಲೆ ಯಾವುದೇ ಸಂಘ-ಸಂಸ್ಥೆಗಳ ಹೆಸರು, ಚಿನ್ನೆ, ಲಾಂಛನ ಹಾಕುವಂತಿಲ್ಲ ಎಂದು ತಿಳಿಸಿದ್ದರೂ, ಕೆಲವರು ಅನಧಿಕೃತ ಹೆಸರು, ಲಾಂಛನ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದೆ.
ಈ ಬಗ್ಗೆ ರಾಜ್ಯದ ಎಲ್ಲಾ ವಿಭಾಗಗಳ ಜಂಟಿ ಸಾರಿಗೆ ಆಯುಕ್ತರಿಗೆ ಸಾರಿಗೆ ಇಲಾಖೇ ಸೂಚನೆ ನೀಡಿದ್ದು, ಅನಧಿಕೃತ ನಾಮಫಲಕ ತೆರವುಗೊಳಿಸಲು, ಉಚ್ಛ ನ್ಯಾಯಾಲಯವು ಕಾಲ ಕಾಲಕ್ಕೆ ಮಧ್ಯಂತರ ಆದೇಶಗಳನ್ನು ನೀಡುತ್ತಾ ಬಂದಿದೆ. ಆದರೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವಂತ ರಾಷ್ಟ್ರೀಯ, ರಾಜ್ಯ ಮಾನವ ಹಕ್ಕುಗಳ ಒಕ್ಕೂಟ, ಸಂಸ್ಥೆ ಇತ್ಯಾದಿ ಹೆಸರುಗಳನ್ನು ಚಿಹ್ನೆ, ಲಾಂಛನಗಳನ್ನು ಹಾಗೂ ಸಂಘ-ಸಂಸ್ಥೆಗಳ ಹೆಸರು ಅಳವಡಿಸಿಕೊಂಡು ಓಡಾಡುತ್ತಿದ್ಧಾರೆ ಎಂದು ಎಚ್ಚರಿಕೆ ನೀಡಿದೆ.



