ಬೆಂಗಳೂರು: ಅರ್ಧ ವೇತನ, ಅಧಿಕಾರಿಗಳ ಕಿರುಕುಳ, ರಜೆ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಸಾರಿಗೆ ನೌಕರರು ಧರಣಿ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ನಾಳೆ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಆದರೆ, ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯವಿಲ್ಲ ಎಂದು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ.
ಡಿಸೆಂಬರ್ ತಿಂಗಳಿಂದ ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಮುಷ್ಕರದ ನಂತರ ನೌಕರರ ಮೇಲೆ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ನಾವು ನಾಳೆ ಸಾಂಕೇತಿಕವಾಗಿ ಒಂದು ದಿನ ಮುಷ್ಕರ ಮಾಡಲು ಮುಂದಾಗಿದ್ದೇವೆ. ಬೇಡಿಕೆಗಳ ಈಡೇರಿಸದಿದ್ದರೆ ಮುಂದೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ತಿಳಿಸಿದ್ದಾರೆ. ನಾಳೆ ಯಾವುದೇ ರೀತಿಯ ಬಸ್ ಸಂಚಾರಕ್ಕೆ ಅಡ್ಡಿ ಪಡಿಸುವುದಿಲ್ಲ. ಬಸ್ ಸಂಚಾರ ಯಥಾಸ್ಥಿತಿ ಇರುತ್ತದೆ. ಸಂಕೇತಿಕವಾಗಿ ಬಿಎಂಟಿಸಿ ಕಚೇರಿ ಎಂದುರು ಧರಣಿ ನಡೆಸುತ್ತೇವೆ ಎಂದು ಕಾರ್ಮಿಕ ಸಂಘಟನೆ ಮುಖಂಡರು ತಿಳಿಸಿದ್ದಾರೆ.
ಡಿಸೆಂಬರ್‍ನಲ್ಲಿ ಸಾರಿಗೆ ನೌಕರರ ಒಕ್ಕೂಟದ ವತಿಯಿಂದ ಮೂರ್ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಸಾರಿಗೆ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಂಚಾರ ವ್ಯತ್ಯಯ ಉಂಟಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ಆರೋಗ್ಯ ವಿಮೆ, ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ನೌಕರರಿಗೆ 30 ಲಕ್ಷ ಪರಿಹಾರ ನೀಡಬೇಕು, ತರಬೇತಿ ಅವಧಿ ಕಡಿತ, ಅಧಿಕಾರಿಗಳ ಕಿರುಕುಳ, ಕರ್ತವ್ಯದ ಅವಧಿ ಕಡಿತ ಮಾವುದೂ ಸೇರಿದಂತೆ 12 ಬೇಡಿಕೆಗಳನ್ನು ಮುಂದಿಟ್ಟು ನಡೆಸಿದ್ದ ಪ್ರತಿಭಟನೆಗೆ ಸರ್ಕಾರ ಮೂರು ತಿಂಗಳ ಕಾಲವಕಾಶ ಕೇಳಿತ್ತು. ಈಗಾಗಲೇ ಎರಡು ತಿಂಗಳು ಮುಗಿದಿದ್ದು, ಸರ್ಕಾರ ಯಾವುದೇ ಬೇಡಿಕೆ ಈಡೇರಿಸಿಲ್ಲ. ಪ್ರತಿಭಟನೆ ನಂತರ ಕಿರುಕುಳ ಹೆಚ್ಚಾಗಿದೆ.
ನಾಳೆ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಸಿಐಟಿಯು) ಧರಣಿ ಹಮ್ಮಿಕೊಂಡಿದೆ. ಒಟ್ಟಾರೆ ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದೆ. ಬೇಡಿಕೆಗಳ ಈಡೇರಿಕೆಗೆ ನೌಕರರು ಆಗ್ರಹಿಸಿದ್ದರೆ, ಸರ್ಕಾರ ಆರ್ಥಿಕ ಕೊರತೆಯ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಪ್ರತಿಭಟನೆ ಯಾವ ತಿರುವು ಪಡೆಬೇಕಿದೆ.