ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50ರಷ್ಟು ಬೆಟ್ ಗಳನ್ನು ನಾಳೆಯಿಂದ (ಭಾನುವಾರ) ಕೋವಿಡ್ ಚಿಕಿತ್ಸೆಗೆ ನೀಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದರು.
ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿದಂತೆ ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಚರ್ಚಿಸಿದ ಅವರು, ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌ಗಳ ಕೊರತೆ ಇದ್ದರೆ ಸರ್ಕಾರ ನೇಮಿಸಿಕೊಳ್ಳಲಿದೆ. ಅಗತ್ಯ ನೆರವು ನೀಡಲು ಸಿದ್ಧವಿದ್ದೇವೆ ಎಂದು ಹೇಳಿದರು.
ಸಿಎಂ ಮನವಿಗೆ ಸ್ಪಂದಿಸಿದ ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ಕೆಲವು ಕಾಲೇಜುಗಳು ಶೇ 50ರಷ್ಟು ಹಾಗೂ ಇನ್ನೂ ಕೆಲವು ಕಾಲೇಜುಗಳು ಶೇ. 80ರಷ್ಟು ಹಾಸಿಗೆ ನೀಡುತ್ತೇವೆ. ಅಗತ್ಯವಿದ್ದರೆ ವೆಂಟಿಲೇಟರ್ ನೀಡುತ್ತೇವೆ ಎಂದರು.
ಕೊರೊನಾ ಸಂಕಷ್ಟ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳ ಸಹಕಾರ ಅಗತ್ಯವಾಗಿದೆ. ಕೆಲವು ಕಡೆ ಕೊರೊನಾ ಇಲ್ಲದವರಿಗೆ ಚಿಕಿತ್ಸೆ ನೀಡಲು ನಿರಾಕಸಿರುವುದು ಗಮನಕ್ಕೆ ಬಂದಿದೆ. ಇದನ್ನು ಸಹಿಸಲು ಸಾಧ್ಯ ಆಗದು. ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಮಾದರಿಯಾಗಿತ್ತು. ಅದೇ ರೀತಿ ಮುಂದೆಯೂ ಮಾದರಿಯಾಗಿರಬೇಕೆಂದು ಆಶಯ ವ್ಯಕ್ತಪಡಿಸಿದರು.ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 2 ಸಾವಿರ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು 4,500 ಬೆಡ್ ನೀಡಲು ಒಮ್ಮತದ ತೀರ್ಮಾನವಾಗಿತ್ತು. ಆದರೆ, ವೈದ್ಯಕೀಯ ಕಾಲೇಜುಗಳು ಬೆಡ್ ನೀಡಲು ನಿರಾಕರಿಸಿದ್ದರಿಂದ ಗೊಂದಲ ಉಂಟಾಗಿದೆ. ವೈದ್ಯಕೀಯ ಕಾಲೇಜುಗಳ ಬೆಡ್ ಲಭ್ಯತೆ ಬಗ್ಗೆ ನಿಗಾ ಇಡಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.