ಬೆಂಗಳೂರು: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೃತಪಟ್ಟಿದ್ದು, ದೊಡ್ಡಮನೆಗೆ ದೊಡ್ಡ ಆಘಾತವಾಗಿದೆ. ಪುನೀತ್ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಹೃದಾಯಾಘಾತ ಸಂಭವಿಸಿದ್ದು, ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ನಟ ಪುನೀತ್ ರಾಜಕುಮಾರ ಅವರ ಅನಾರೋಗ್ಯದ ಮಾಹಿತಿ ಪಡೆದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಕ್ರಮ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ತಮ್ಮ ಶೃಂಗೇರಿ ಪ್ರವಾಸವನ್ನು ಮೊಟಕುಗೊಳಿಸಿರುವ ಸಿಎಂ ಬೊಮ್ಮಾಯಿ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಪುನೀತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ವೈದ್ಯ ಡಾ.ರಂಗನಾಥ್ ನಾಯಕ್, ಬೆಳಗ್ಗೆ 11.30ಕ್ಕೆ ಪುನೀತ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ನಾವು ಅವರಿಗೆ ಚಿಕಿತ್ಸೆ ಆರಂಭಿಸಿದೆವು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.
ಸಹೋದರ ಶಿವರಾಜ್ ಕುಮಾರ್, ನಟರಾದ ದರ್ಶನ್, ಪ್ರೇಮ್, ರವಿಚಂದ್ರನ್, ಗಣೇಶ್ ನಟಿ ಶ್ರುತಿ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.



