Connect with us

Dvgsuddi Kannada | online news portal | Kannada news online

ದಾವಣಗೆರೆ: ಮಳೆ ಹಾನಿಯಿಂದ ಬೆಳೆ, ಮನೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸಲು ಕರಾರುವಕ್ಕಾದ ಸಮೀಕ್ಷೆ ನಡೆಸಿ; ಜಿಲ್ಲಾ ಉಸ್ತುವಾರಿ ಸಚಿವ

ದಾವಣಗೆರೆ

ದಾವಣಗೆರೆ: ಮಳೆ ಹಾನಿಯಿಂದ ಬೆಳೆ, ಮನೆ ಕಳೆದುಕೊಂಡವರಿಗೆ ಪರಿಹಾರ ಕಲ್ಪಿಸಲು ಕರಾರುವಕ್ಕಾದ ಸಮೀಕ್ಷೆ ನಡೆಸಿ; ಜಿಲ್ಲಾ ಉಸ್ತುವಾರಿ ಸಚಿವ

ದಾವಣಗೆರೆ; ಮುಂಗಾರು ಹಂಗಾಮಿನಲ್ಲಿ ಭಾರೀ ಮಳೆಯಿಂದ ಬೆಳೆ ನಷ್ಟವುಂಟಾಗಿದ್ದು, ಈಗಾಗಲೇ ಸಮೀಕ್ಷೆ ಕೈಗೊಂಡು ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ. ಇದರಿಂದ ಯಾವ ರೈತರು ಸಹ ಬಿಟ್ಟುಹೋಗದಂತೆ ಕರಾರುವಕ್ಕಾದ ಸಮೀಕ್ಷೆ ಕೈಗೊಳ್ಳಬೇಕೆಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಪರಿಶೀಲನೆ ನಡೆಸಿ ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಬಿದ್ದ ಅಧಿಕ ಮಳೆಯಿಂದ ಮೆಕ್ಕೆಜೋಳ, ಹತ್ತಿ, ಭತ್ತ ಸೇರಿದಂತೆ ತೋಟಗಾರಿಕೆ ಬೆಳೆಗಳು ಸೇರಿದಂತೆ 16228 ಹೆಕ್ಟೇರ್‍ಗಿಂತಲೂ ಅಧಿಕ ಬೆಳೆ ನಷ್ಟವಾಗಿದೆ. ಇದರಲ್ಲಿ 19515 ರಷ್ಟು ರೈತರು ಸೇರಿದ್ದಾರೆ. ಸಮೀಕ್ಷೆ ಮಾಡಿದ ರೈತರಿಗೆ ಈಗಾಗಲೇ 17.87 ಕೋಟಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಅದೇ ರೀತಿ ಅಧಿಕ ಮಳೆಯಿಂದ ಅನೇಕ ಜನರು ಮನೆಗಳನ್ನು ಕಳೆದುಕೊಂಡಿದ್ದು ಕೆಲವು ಮನೆಗಳು ದುರಸ್ಥಿಗೆ ಒಳಗಾಗಿವೆ. ಈ ಮನೆಗಳಿಗೂ ಪರಿಹಾರವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರಗಳಿಗೆ ಪ್ರವಾಸ ಕೈಗೊಂಡು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕೆಲಸ ಮಾಡಲಿದ್ದು ಸಾರ್ವಜನಿಕರಿಂದ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳು ಬಾರದಂತೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ಸೂಚನೆ; ಶಾಂತಿಸಾಗರ ಹಿನ್ನೀರಿನಿಂದ ರುದ್ರಾಪುರ ಗ್ರಾಮ ನೀರಿನಿಂದ ಆವೃತವಾಗಿದ್ದು ಜನರಿಗೆ ತುಂಬಾ ತೊಂದರೆಯಾಗಿತ್ತು ಎಂದು ಚನ್ನಗಿರಿ ಶಾಸಕರಾದ ಮಾಡಾಳು ವಿರುಪಾಕ್ಷಪ್ಪ ಪ್ರಸ್ತಾಪಿಸಿದಾಗ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆಯವರು ಇಂತಹ ಸಂದರ್ಭದಲ್ಲಿ ತುಂಬಾ ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ಸಚಿವರು ಸೂಚಿಸಿ ನದಿ ಪಾತ್ರದಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಶಾಶ್ವತ ಪರಿಹಾರವಾಗಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.
ಸರ್ಕಾರದ ಸಂಪನ್ಮೂಲ ಹೆಚ್ಚಿಸಿ; ಈ ವರ್ಷ ಸಾಕಷ್ಟು ಮಳೆ ಬಂದಿದ್ದು ಜಿಲ್ಲೆಯಲ್ಲಿನ ಕೆರೆಗಳು ಭರ್ತಿಯಾಗಿವೆ. ಈ ಕೆರೆಗಳಲ್ಲಿ ಮೀನುಪಾಲನೆ ಮಾಡುವುದರಿಂದ ಸರ್ಕಾರಕ್ಕೆ ಆದಾಯವು ಬರಲಿದೆ ಹಾಗೂ ಸ್ಥಳೀಯ ಜನರಿಗೆ ಉದ್ಯೋಗವು ದೊರೆಯಲಿದೆ. ಆದರೆ ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಈ ನಿಟ್ಟಿನಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದ ಅವರು ಬೇಜವಾಬ್ದಾರಿ, ಉದಾಸೀನತೆ ಸಹಿಸಲಾಗುವುದಿಲ್ಲ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಇಲಾಖೆ ಅಧಿಕಾರಿಯವರು ರೂ.89 ಲಕ್ಷ ಕೆರೆಗಳ ಹರಾಜಿನಿಂದ ಬಂದಿದ್ದು ಇನ್ನೂ ಹಲವು ಕೆರೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಹೆಚ್ಚಿದ ದೂರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ಸಂಸದರಾದ ಡಾ; ಜಿ.ಎಂ.ಸಿದ್ದೇಶ್ವರ ಅವರು ಪ್ರಸ್ತಾಪಿಸಿ ಲೈಸೆನ್ಸ್ ನೀಡಲು ಸಹ ಸಾರ್ವಜನಿಕರು ನನ್ನ ಹತ್ತಿರ ಬರುತ್ತಾರೆ ಎಂದಾಗ ಸಚಿವರು ಏಕೆ ಈ ರೀತಿ ಕಾರ್ಯನಿರ್ವಹಣೆ ಇದನ್ನು ಸಹಿಸಲಾಗುವುದಿಲ್ಲ ಇದನ್ನು ಸರಿಪಡಿಸಿಕೊಂಡು ಕೆಲಸ ನಿರ್ವಹಿಸಬೇಕು. ಜನರ ಕೆಲಸಗಳನ್ನು ಮಾಡದಿದ್ದಾಗ ಜನರು ಜನಪ್ರತಿನಿಧಿಗಳ ಬಳಿ ಬರುತ್ತಾರೆ ಎಂದರು. ಚಿಗಟೇರಿ ಆಸ್ಪತ್ರೆಯಲ್ಲಿ ಎಲ್ಲ ವಿಭಾಗಗಳನ್ನು ಸುಸಜ್ಜಿತವಾಗಿಟ್ಟುಕೊಂಡು ಜನರಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕೆಂದು ತಿಳಿಸಿ ಆದಷ್ಟು ಬೇಗ ಸಲಹಾ ಸಮಿತಿ ಸಭೆ ಕರೆಯಲು ಸೂಚನೆ ನೀಡಿದರು.
ಹತ್ತು ದಿನಗಳಲ್ಲಿ ಕಡತ ವಿಲೆ ಮಾಡಲು ಸೂಚನೆ; ಆಡಳಿತಕ್ಕೆ ಇನ್ನಷ್ಟು ವೇಗ ಹೆಚ್ಚಿಸಲು ತಾಲ್ಲೂಕುಗಳಿಂದ ಬರುವ ಎಲ್ಲಾ ಕಡತಗಳನ್ನು ಹತ್ತು ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪಂಚಾಯತ್‍ಗಳ ಕಾರ್ಯಾಲಯದಿಂದ ವಿಲೆ ಮಾಡಬೇಕು. ಕಡತದಲ್ಲಿ ಯಾವುದಾದರೂ ಮಾಹಿತಿಯ ಕೊರತೆ ಇದ್ದಲ್ಲಿ ಅಧಿಕಾರಿಗಳನ್ನು ಕರೆಯಿಸಿ ಅಗತ್ಯ ದಾಖಲೆಗಳನ್ನು ಪಡೆಯುವ ಮೂಲಕ ತ್ವರಿತಗತಿಯಲ್ಲಿ ಕಡತಗಳನ್ನು ಕಳುಹಿಸಬೇಕೆಂದು ಸಚಿವರು ಸೂಚನೆ ನೀಡಿದರು. ಈ ವೇಳೆ ಚನ್ನಗಿರಿ ಶಾಸಕರಾದ ಮಾಡಾಳು ವಿರುಪಾಕ್ಷಪ್ಪನವರು ಪ್ರಸ್ತಾಪಿಸಿದರು.

ಗೈರಾದ ಅಧಿಕಾರಿಗೆ ನೋಟಿಸ್; ಬೆಸ್ಕಾಂ ದಾವಣಗೆರೆ ಕಾರ್ಯಪಾಲಕ ಇಂಜಿನಿಯರ್ ಕೆಡಿಪಿ ಸಭೆ ಯಾವುದೇ ಪೂರ್ವಾನುಮತಿ ಪಡೆಯದೆ ಗೈರು ಹಾಜರಾಗಿ ತಮ್ಮ ಅಧೀನ ಅಧಿಕಾರಿಗಳನ್ನು ಸಭೆಗೆ ಕಳುಹಿಸಿದ್ದು ನೋಟಿಸ್ ನೀಡಿ ಪ್ರತಿಯನ್ನು ಬೆಸ್ಕಾಂ ಎಂಡಿ ಹಾಗೂ ಜಿಲ್ಲಾ ಸಚಿವರ ಕಾರ್ಯಾಲಯಕ್ಕೂ ಕಳುಹಿಸಲ ಸೂಚನೆ ನೀಡಿದರು.
ಎನ್.ಆರ್.ಎಲ್.ಎಂ.ರಡಿ ರೂ.1.50 ಲಕ್ಷ ಸಹಾಯಧನ; ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‍ರಡಿ (ಎನ್.ಆರ್.ಎಲ್.ಎಂ) ಜಿಲ್ಲೆಯಲ್ಲಿ ಒಟ್ಟು 26 ಒಕ್ಕೂಟಗಳು ಮತ್ತು 745 ಸ್ವ ಸಹಾಯ ಸಂಘಗಳು ಕೆಲಸ ನಿರ್ವಹಿಸುತ್ತಿದ್ದು ಒಟ್ಟು 40 ಕೋಟಿಯನ್ನು ಬೀಜಧನವನ್ನಾಗಿ ವಿತರಣೆ ಮಾಡಲಾಗಿದೆ. ಪ್ರತಿ ಸಂಘಕ್ಕೆ ರೂ.1 ಲಕ್ಷ ನೀಡಲಾಗುತ್ತಿದೆ. ಇದನ್ನು ಬಳಕೆ ಮಾಡಿಕೊಂಡು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಸಿಇಓ ಡಾ;ಚನ್ನಪ್ಪ ತಿಳಿಸಿದಾಗ ಮಾಡಾಳು ವಿರುಪಾಕ್ಷಪ್ಪನವರು ಇದನ್ನು ಕಳೆದ ತಿಂಗಳಿನಿಂದ ರೂ.1.50 ಲಕ್ಷಕ್ಕೆ ಹೆಚ್ಚಿಸಲಾಗಿದ್ದು ಇದನ್ನು ರೂ.10 ಲಕ್ಷದವರೆಗೆ ಹೆಚ್ಚಳ ಮಾಡಬೇಕೆಂದು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದು ಅತ್ಯಂತ ಉಪಯುಕ್ತ ಯೋಜನೆ ಇದಾಗಿದ್ದು ಹೆಚ್ಚಿನ ಅರಿವು ಜನರಿಗೆ ಮೂಡಿಸಬೇಕಾಗಿದೆ ಎಂದರು.

ಸಭೆಯಲ್ಲಿ ಶಾಸಕ ಎಸ್.ಎ ರವೀಂದ್ರನಾಥ್, ಪ್ರೋ ಲಿಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಕೆ.ಎಸ್ ನವೀನ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಎ.ಚನ್ನಪ್ಪ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top