Connect with us

Dvgsuddi Kannada | online news portal | Kannada news online

ದಾವಣಗೆರೆ: ತಿಂಗಳಂತ್ಯಕ್ಕೆ ಎರಡು ಡೋಸ್ ಪಡೆದ‌ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಬೇಕು: ಸಚಿವ ಭೈರತಿ ಬಸವರಾಜ

ದಾವಣಗೆರೆ

ದಾವಣಗೆರೆ: ತಿಂಗಳಂತ್ಯಕ್ಕೆ ಎರಡು ಡೋಸ್ ಪಡೆದ‌ ಎಲ್ಲರಿಗೂ ಬೂಸ್ಟರ್ ಡೋಸ್ ನೀಡಬೇಕು: ಸಚಿವ ಭೈರತಿ ಬಸವರಾಜ

ದಾವಣಗೆರೆ: ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲರಿಗೂ ಎರಡು ಡೋಸ್ ಲಸಿಕೆ ಆಗಿರುವ ಬಗೆಗೆ ಖಾತ್ರಿ ಪಡಿಸಿಕೊಳ್ಳಬೇಕು. ಬೂಸ್ಟರ್ ಡೋಸ್ ಪಡೆದಿರುವವರ ಪ್ರಮಾಣ ಶೇ. 26 ರಷ್ಟಿದ್ದು ಈ ತಿಂಗಳಾಂತ್ಯಕ್ಕೆ ಶೇ.100 ರಷ್ಟು ಬೂಷ್ಟರ್ ಡೋಸ್ ಲಸಿಕೆ ಆಗಬೇಕು ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ನಾಲ್ಕನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆ ಉಂಟಾಗದಂತೆ ಕ್ರವವಹಿಸಿ, ರಾಗಿ ಖರೀದಿಗೆ ಸಂಬಂಧಿಸಿದಂತೆ ಆಹಾರ ನಾಗರಿಕ ಸರಬರಾಜು ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಖುದ್ದಾಗಿ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಸರ್ಕಾರದ ಆದೇಶದಂತೆ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಪ್ರತಿ ಎಕರೆಗೆ 10-15 ಕ್ವಿಂಟಾಲ್ ರಾಗಿ ಖರೀದಿಸಬಹುದಾಗಿದೆ. ನೇರವಾಗಿ ಪಹಣಿ ಇರುವ ಹಿಡುವಳಿದಾರರ ಬಳಿ ಮಾತ್ರ ರಾಗಿ ಖರೀದಿಸಿ, ಒಂದುವೇಳೆ ರಾಗಿ ಖರೀದಿಯ ಕುರಿತು ರೈತರು ಅಪಸ್ವರ ಎತ್ತಿದರೆ ಅಧಿಕಾರಿಗಳೇ ನೇರಹೊಣೆ ಆಗಬೇಕಾಗುತ್ತದೆ ಎಂದು ಸೂಚಿಸಿದರು.

ಜಗಳೂರು ಕ್ಷೇತ್ರದ ಶಾಸಕರು ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡದ ಅಧ್ಯಕ್ಷ ಎಸ್.ವಿ ರಾಮಚಂದ್ರ ಮಾತನಾಡಿ, ರಾಗಿ ಖರೀದಿಗೆ ಸಂಬಂಧಿಸಿದಂತೆ ಜಗಳೂರು ತಾಲ್ಲೂಕಿನಲ್ಲಿ ಬಹಳಷ್ಟು ಅವ್ಯವಹಾರ ನಡೆಯುತ್ತಿವೆ. ಮಂಡ್ಯ ಭಾಗದಿಂದ ಖರೀದಿದಾರರನ್ನು ಕರೆತಂದು ಮಧ್ಯವರ್ತಿ ಹಾವಳಿಯಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ರಾಗಿ ಬೆಳೆಯದೇ ಇರುವ ರೈತರಿಂದ ಅಕ್ರಮವಾಗಿ ದಾಖಲೆ ಸೃಷ್ಠಿಸಿ ಖರೀದಿಸುವ ಕೆಲಸಗಳು ನಡೆಯುತ್ತಿವೆ ಕೂಡಲೇ ಇವುಗಳ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿ, 20 ರೈತ ಸಂಪರ್ಕ ಕೇಂದ್ರ ಮತ್ತು ಹೆಚ್ಚುವರಿ ಕೇಂದ್ರಗಳ ಮೂಲಕ ಬಿತ್ತನೆಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗುವುದು, ವಿಶೇಷವಾಗಿ ಈ ಬಾರಿ ಸೋಯಾಬೀನ್ ವಿತರಣೆಗೆ ಆದ್ಯತೆ ನೀಡಲಾಗುವುದು. ಜಿಲ್ಲೆಯಲ್ಲಿ ಯಾಂತ್ರೀಕೃತ ಭತ್ತದ ನಾಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಡ್ರಮ್ ಸೀಡರ್ ಮೂಲಕ ಭತ್ತದ ಬಿತ್ತನೆಯನ್ನು ಕೈಗೊಳ್ಳಲಾಗಿದೆ. ಚೆಲ್ಲು ಭತ್ತದ ಪದ್ದತಿಗೆ ಸೂಕ್ತ ತಾಂತ್ರಿಕತೆಗಳನ್ನು ರೈತರಿಗೆ ಪ್ರಚಾರಪಡಿಸಲಾಗುತ್ತಿದೆ. ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ 22,260 ವಿದ್ಯಾರ್ಥಿಗಳಿಗೆ 9.25 ಕೋಟಿ ರೂಗಳಷ್ಟು ವಿದ್ಯಾರ್ಥಿವೇತನವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಲಸಿಕಾ ಕಾರ್ಯಕ್ರಮವನ್ನು ಶೇ.102 ರಷ್ಟು ಪೂರ್ಣಗೊಳಿಸಲಾಗಿದೆ. ಬೂಸ್ಟರ್ ಡೋಸ್ ಲಸಿಕಾಕರಣದಲ್ಲಿ ಶೇ.26 ರಷ್ಟು ಪ್ರಗತಿ ಸಾಧಿಸಲಾಗಿದೆ, 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶೇ.72ರಷ್ಟು ಲಸಿಕಾಕರಣದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಹರಿಹರ ಕ್ಷೇತ್ರದ ಶಾಸಕ ಎಸ್ ರಾಮಪ್ಪ ಮಾತನಾಡಿ, ಹರಿಹರ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿ 20 ರಿಂದ 25 ವರ್ಷದವರೆಗೆ ಸುದೀರ್ಘವಾಗಿ ಕೆಲಸ ಮಾಡುತ್ತಿರುವ ನೌಕರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಂತಹ ಬೇಜವಾಬ್ದಾರಿಯುತ ನೌಕರರನ್ನು ಕೂಡಲೇ ವರ್ಗಾವಣೆಗೊಳಿಸಿ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಹೇಳಿದರು.

ಇದೇ ವೇಳೆ ಮಾತನಾಡಿದ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೊ. ಎನ್ ಲಿಂಗಣ್ಣ, ಮಾಯಕೊಂಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಕ್ಷೇತ್ರದ ಹೂವಿನಮಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರರೊಬ್ಬರು ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ರೋಗಿಯೊಬ್ಬರಿಗೆ ಚುಚ್ಚುಮದ್ದು ನೀಡಿದ ಪ್ರಕರಣ ನಡೆದಿದೆ, ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಜೊತೆಗೆ ಆರೋಗ್ಯ ಇಲಾಖೆಗೆ ನೀಡಿದ 2 ಅಂಬುಲೆನ್ಸ್‍ಗಳು ಚಾಲಕರಿಲ್ಲದೆ ಕಾರ್ಯನಿರ್ವಹಿಸದೆ ನಿಂತಿವೆ ಶೀಘ್ರದಲ್ಲಿಯೇ ಚಾಲಕರನ್ನು ನೇಮಿಸಿ ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಡಾ.ಕೆ.ಕೆ ಪ್ರಕಾಶ್ ಮಾಹಿತಿ ನೀಡಿ, ಪ್ರಸಕ್ತ ಸಾಲಿನಲ್ಲಿ 272 ಜನ ವಿಕಲಚೇತನರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ. 41 ಜನರಿಗೆ ವಿವಾಹ ಪ್ರೋತ್ಸಾಹ ಧನ, 02 ಜನರಿಗೆ ಮರಣ ಪರಿಹಾರ, ಶ್ರವಣದೋಷವುಳ್ಳವರಿಗೆ ಹೊಲಿಗೆ ಯಂತ್ರ ಹಾಗೂ ಆಧಾರ ಸಾಲ ಒದಗಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್ ತಿಪ್ಪೇಶಪ್ಪ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ, ಮೇ 16 ರಿಂದ ಪುನಃ ಶಾಲೆಗಳು ಪ್ರಾರಂಭವಾಗುತ್ತಿದ್ದು ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಳೆಹಾನಿಯಿಂದ ಕೆಲವೆಡೆ ಶಾಲಾ ಕೊಠಡಿಗಳು ಹಾಳಾಗಿದ್ದು ಅವುಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕಳುಹಿಸಲಾಗಿದೆ ಎಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಜಿಲ್ಲೆಯ 876 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಅಡಿ ಕಾಮಗಾರಿಗಳು ಪ್ರಗತಿಯಲ್ಲಿದ್ದು 188 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು. ಸಿ.ಇ.ಓ. ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಿಲ್ಲ, ಬೇಸಿಗೆಯಲ್ಲಿ ಉಂಟಾಗಬಹುದಾದ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾಹಿತಿ ನೀಡಿ,ಜಿಲ್ಲೆಯಲ್ಲಿ 80 ಬಿಸಿಎಂ ಹಾಸ್ಟೆಲ್ಗಳಿದ್ದು, 40 ಸ್ವಂತ ಕಟ್ಟಡಗಳು ಹಾಗೂ 33 ಬಾಡಿಗೆ ಕಟ್ಟಡಗಳು ಮತ್ತು 2 ಉಚಿತ ಕಟ್ಟಡಗಳಿವೆ. 35 ಸಾವಿರ ವಿದ್ಯಾರ್ಥಿಗಳಿಗೆ 14 ಕೋಟಿ ವಿದ್ಯಾರ್ಥಿವೇತನ ಡಿಬಿಟಿ ಮಾಡಲಾಗಿದೆ ಎಂದರು.

ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿ ಜಿಲ್ಲೆಯಲ್ಲಿ 400 ಹೆಕ್ಟೇರ್‍ನಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ, 2.16 ಲಕ್ಷದಷ್ಟು ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದರು.‌ಸಭೆಯಲ್ಲಿ ಉಳಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಆಯಾ ಇಲಾಖೆಯ ಅಭಿವೃದ್ದಿ ಕಾರ್ಯಕ್ರಮ ಮತ್ತು ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸದ ಡಾ.ಜಿ.ಎಂ ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top