ದಾವಣಗೆರೆ: ಜಿಲ್ಲೆಯಾದ್ಯಂತ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್‌ಎಂ) ಸ್ಥಾಪನೆಗೆ 653 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 200 ಅರ್ಜಿಗಳಿಗೆ ರೂ.1652 ಲಕ್ಷ ಸಾಲ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಹಾಗೂ ಆತ್ಮನಿರ್ಭರ ಭಾರತ ಅಭಿಯಾನದ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‌ನ ಎಸ್.ಎಸ್.ಮಲ್ಲಿಕಾರ್ಜುನ ಸಭಾಂಗಣದಲ್ಲಿ ಆಯೋಜಿಸಲಾದ “ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಕುಟುಂಬ, ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆದಾರ ಹಾಗೂ ಮಹಿಳೆಯರ ಬಲವರ್ಧನೆಗೊಳಿಸಲು 2020 ರಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಯೋಜನೆ ಅನುಷ್ಟಾನಗೊಳಿಸಲಾಗಿದೆ. ಇದು ಭಾರತ ಸರ್ಕಾರದ ಪ್ರಮುಖ ಪ್ರಾಯೋಜಿತ ಕಾರ್ಯಕ್ರಮವಾಗಿದೆ.
ರೈತ ಬೆಳೆದ ಬೆಳೆಗೆ ತಕ್ಕ ಬೆಂಬಲ ಬೆಲೆ ಸಿಗುವುದಿಲ್ಲ. ಆದ್ದರಿಂದ ಈ ಯೋಜನೆ ಮೂಲಕ ರೈತ ತಾನು ಬೆಳೆದ ಬೆಳೆಗೆ ನಿಗದಿತ ಬೆಲೆ ತರುವ ಮುಖೇನ ಸ್ಥಳೀಯವಾಗಿ ಬೆಳೆದ ರೈತ ಉತ್ಪನ್ನ, ಸಿರಿ ಧಾನ್ಯ ಬಳಸಿ ಸಣ್ಣ ಉದ್ದಿಮೆದಾರ, ಸ್ವ-ಸಹಾಯ ಸಂಘದ ಮಹಿಳೆಯರು ತಾವು ತಯಾರಿಸಿದ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಬೇಕು. ಆಗ ರೈತ ಬೆಳೆದ ಬೆಳೆಗೆ ಉತ್ಪನ್ನ ಮಾರಾಟಗಾರರಿಗೆ ಸಮನಾದ ಬೆಲೆ ಸಿಗಲಿದೆ. ಉತ್ಪಾದಕರು ತಯಾರಿಸಿದ ಉತ್ಪನ್ನಕ್ಕೆ ಬ್ರ್ಯಾಂಡಿಂಗ್ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಬೆಂಬಲ ಬೆಲೆ ನೀಡಿ ವ್ಯಾಪಾರ ವಹಿವಾಟು ಹೆಚ್ಚಿಸಲು ಸಹಾಯ ಮಾಡಲಾಗುವುದು. ಪ್ರಮುಖವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು..?
ಸಣ್ಣ ಉದ್ದಿಮೆದಾರರು, ರೈತರು ವಿಶೇಷವಾಗಿ ಯುವಕರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ವಿನೂತನ ಶೈಲಿಯಲ್ಲಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸ್ವಂತ ಉದ್ಯಮಿಗಳಾಗಿ ನಾಲ್ಕಾರು ಜನಕ್ಕೆ ಕೆಲಸ ನೀಡುವಂತಹ ಸಾಮರ್ಥ್ಯ ವೃದ್ದಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೂಸಂಬೆ ಗ್ರಾಮದ ರೈತ ಪಿಎಂಎಫ್‌ಎಂ ಯೋಜನೆ ಮತ್ತು ಕೃಷಿ ಇಲಾಖೆಯ ಸಹಾಯದಿಂದ ಮಿಲೆಟ್ ಬಿಸ್ಕೆಟ್ ಉತ್ಪನ್ನ ಘಟಕ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಇಂದು ಅವರು ತಯಾರಿಸಿದ ಉತ್ಪನ್ನವನ್ನು ದೇಶ ವಿದೇಶಗಳಿಗೆ ರಫ್ತು ಮಾಡಲಾಗುವುದಲ್ಲದೇ, ವಿಮಾನಗಳಲ್ಲಿ ಮಿಲೆಟ್ ಬಿಸ್ಕೆಟ್‌ನ್ನು ಬಳಸಲು ಅವಕಾಶ ದೊರಕಿದೆ. ಅದೇ ರೀತಿ ಪ್ರತಿಯೊಬ್ಬರೂ ಸಿರಿಧಾನ್ಯ ಮತ್ತು ಇತರೆ ಧಾನ್ಯಗಳ ಸಂಸ್ಕರಣೆ ಬಳಸಿ ರೋಟಿ ತಯಾರಿ, ಬೆಲ್ಲ, ನಿಂಬೆ, ಬೇಕರಿ, ಮಸಾಲಾ, ತೆಂಗು ಮತ್ತು ಕುಕ್ಕುಟ ಉತ್ಪನ್ನ ಹಾಗೂ ಕೋಲ್ಡ್ ಪ್ರೆಸ್ಡ್ ಆಯಿಲ್, ಮೆಣಸಿನ ಪುಡಿ ಘಟಕ, ಶುಂಠಿ ಸಂಸ್ಕರಣ ಘಟಕ ಸೇರಿದಂತೆ ಇತರೆ ಉತ್ಪನ್ನಗಳ ತಯಾರಿಸಿ ಯಶಸ್ಸು ಕಾಣಬೇಕು ಎಂದರು.
ಕೇವಲ ಗುಣಮಟ್ಟದ ಉತ್ಪನ್ನ ತಯಾರಿಸಿದರೆ ಸಾಲದು ಬ್ರ್ಯಾಂಡ್, ಪ್ಯಾಕೇಜ್ ಮತ್ತು ಮಾರುಕಟ್ಟೆ ಬಹಳ ಮುಖ್ಯ, ಸಣ್ಣ ಉದ್ದಿಮೆದಾರರಿಗೆ, ಸ್ವ-ಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಬ್ರ್ಯಾಡಿಂಗ್ ಗಾಗಿ ಅವರನ್ನು ಬಲವರ್ಧನೆಗೊಳಿಸಲು ರೂ.62 ಲಕ್ಷ ಹಣ ಇದೆ. ಅಕ್ಕ ಕೆಫೆ ರೀತಿಯಲ್ಲಿ ಉತ್ತಮ ಗುಣಮಟ್ಟ ಮತ್ತು ಆಕರ್ಷಕ ಬ್ರ್ಯಾಂಡ್, ಪ್ಯಾಕಿಂಗ್ ಮಾಡಿದಲ್ಲಿ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ದೊರೆಯಲಿದೆ. ಇದರಿಂದ ಉತ್ಪಾದಕ ಹೆಚ್ಚಿನ ಲಾಭಗಳಿಸುವುದರ ಜೊತೆಗೆ ರೈತನಿಗೆ ಉಪಯುಕ್ತವಾಗಲಿದೆ ಎಂದರು.
ಪ್ರಾಸ್ತಾವಿಕವಾಗಿ ಬೆಂಗಳೂರಿನ ಕೆಫೆಕ್ ಸಂಸ್ಥೆಯ ಚಂದ್ರಶೇಖರ್ ಮಾತನಾಡಿ, ರೈತ ಬೆಳೆ ಬೆಳೆದ ನಂತರ ಅದಕ್ಕೆ ಮೌಲ್ಯವರ್ಧನೆ ಸಿಗುವಂತೆ ಮಾರುಕಟ್ಟೆ ಸೌಲಭ್ಯ ಒದಗಿಸಿ ಸಹಾಯ ಮಾಡಲಾಗುತ್ತದೆ. ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳಿಗೆ ಪಿಎಂಎಫ್‌ಎಂಇ ಸಹಾಯಕವಾಗಿದೆ. ಮಹಿಳೆಯರು, ಯುವಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
ಶೇ.50ರಷ್ಟು ಸಹಾಯಧನ
18 ವರ್ಷ ಮೆಲ್ಪಟ್ಟ ಪ್ರತಿಯೊಬ್ಬ ನಾಗರಿಕನೂ ಯೋಜನೆಯ ಫಲಾನುಭವಿಯಾಗಬಹುದು. ಇದಕ್ಕೆ ಯಾವುದೇ ಶೈಕ್ಷಣಿಕ ಅರ್ಹತೆಯ ಮಾನದಂಡವಿಲ್ಲ. ಹಾಗಾಗಿ ಯುವಕರು ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಂಡು ವಿವಿಧ ರೀತಿಯ ವಿನೂತನ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜೊತೆಗೂಡಿ ಬಲವರ್ಧನೆಗೊಳಿಸಲು 60:40ರ ಅನುಪಾತದಲ್ಲಿ ಶೇ.50ರಷ್ಟು ಸಹಾಯಧನ ನೀಡುತ್ತಿವೆ. ಈ ಯೋಜನೆಯ ಸದುಪಯೋಗ ಪಡೆದುಕೊಂಡು ಯೋಜನೆಯನ್ನು ಇನ್ನಷ್ಟು ಬಲಪಡಿಸೋಣ ಎಂದರು.
ಜಂಟಿ ಕೃಷಿ ನಿರ್ದೇಶಕ ಜೀಯಾವುಲ್ಲಾ ಮಾತನಾಡಿ, ವೈಯಕ್ತಿಕ ಉದ್ದಿಮೆಗಳಿಗೆ, ಮಾಲೀಕತ್ವದ ಗುಂಪುಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮತ್ತು ಸ್ವ-ಸಹಾಯ ಸಂಘಗಳಿಗೆ ಸಾಲ ಸಂಪರ್ಕಿತವಾಗಿ ಶೇ.35 ರಷ್ಟು ಸಹಾಯಧನದ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಶೇ.15 ಸಹಾಯಧನ, ಗರಿಷ್ಠ ರೂ.15 ಲಕ್ಷ ಅಥವಾ ಶೇ.50 ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ.
ಪ್ರಾಥಮಿಕ ಬಂಡವಾಳವಾಗಿ ಆಹಾರ ಸಂಸ್ಕರಣಾ ಚಟುವಟಿಕೆ ತೊಡಗಿರುವ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ದುಡಿಯುವ ಬಂಡವಾಳ ಮತ್ತು ಸಣ್ಣ ಉಪಕರಣ ಖರೀದಿಗಾಗಿ ಪ್ರತಿ ಸದಸ್ಯರಿಗೆ ಗರಿಷ್ಠ ರೂ.40 ಸಾವಿರ ಕಡಿಮೆ ಬಡ್ಡಿದರ ಸಾಲ ಹಾಗೂ ಪ್ರತಿ ಸ್ವ-ಸಹಾಯ ಸಂಘಕ್ಕೆ ಗರಿಷ್ಠ 4 ಲಕ್ಷ ಪಡೆಯಲು ಅವಕಾಶವಿದೆ. ಹಾಗೆಯೇ ಇವರಿಗೆ ಸಾಮಾನ್ಯ ಮೂಲ ಸೌಕರ್ಯ ಸೃಷ್ಠಿಗೆ ವಿಂಗಡಣೆ, ಶ್ರೇಣಿಕರಣ, ಸಂಗ್ರಹಣೆ, ಸಾಮಾನ್ಯ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪ್ರಯೋಗಾಲಯ ಇತ್ಯಾದಿ ಘಟಕಗಳನ್ನು ಸ್ಥಾಪಿಸಿ ಮೂಲ ಸೌಲಭ್ಯ ಒದಗಿಸಲು ಸಹ ಈ ಯೋಜನೆಯಲ್ಲಿ ಅವಕಾಶವಿದೆ ಎಂದರು.
ಈ ವೇಳೆ ಜಿ.ಪಂ. ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ವ್ಯಸನಮುಕ್ತ ಕುರಿತ ಪ್ರತಿಜ್ಞಾವಿಧಿ ಭೋಧಿಸಿದರು. ಉಪ ಕೃಷಿನಿರ್ದೇಶಕ ಎಸ್.ಅಶೋಕ್ ಸ್ವಾಗತಿಸಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಮತಾ ಹೊಸಗೌಡರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹಿರೇಮಠ್, ನಬಾರ್ಡ್ ಸಂಸ್ಥೆಯ ಮುಖ್ಯಸ್ಥೆ ರಶ್ಮಿ ರೇಖಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ರೈತ ಬಾಂಧವರು, ಪಿಎಂಇಎಫ್‌ಎಂಇ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.