ದಾವಣಗೆರೆ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಪಟ್ಟಿಗೆ ಸೇರಿದ 12 ಪ್ರವಾಸಿ ತಾಣಗಳಿವೆ, ಇನ್ನೂ 13 ಪ್ರವಾಸಿ ತಾಣಗಳನ್ನು ಇಲಾಖೆ ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ದಾವಣಗೆರೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ ಹೇಳಿದರು.
ಹರಿಹರ ನಗರದ ಹರಿಹರೇಶ್ವರ ದೇವಸ್ಥಾನದ ಆವರಣದ ಬಿರ್ಲಾ ಸಮುದಾಯ ಭವನದಲ್ಲಿ ಪ್ರವಾಸೋದ್ಯಮದ ಪುನರಾವಲೋಕನ ಎಂಬ ಸಂದೇಶದ ಮೂಲಕ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಪ್ರವಾಸೋದ್ಯಮ ದಿನ-2022” ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಇಲಾಖೆ ವತಿಯಿಂದ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯ ತೀರ್ಥರಾಮೇಶ್ವರ, ಮಡ್ರಳ್ಳಿ, ಕೊಡದಗುಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕುಮಾರನಹಳ್ಳಿ-ಶಿವಮೊಗ್ಗ ರಸ್ತೆಯ ಬಳಿ ಇರುವ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮತ್ತು ಪ್ರವಾಸಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಹರಿಹರ ತಹಶೀಲ್ದಾರ್ ಡಾ.ಎಂ.ಬಿ ಅಶ್ವಥ್ ಮಾತನಾಡಿ, ದೇಶದ ಸಮಗ್ರ ಬೆಳವಣಿಗೆಯಲ್ಲಿ ಪ್ರವಾಸೋದ್ಯಮ ಬಹುಮುಖ್ಯವಾಗಿದ್ದು, ಆದಾಯದ ಮೂಲವಾಗಿ ಬಳಸಿಕೊಳ್ಳುವಲ್ಲಿ ಹಿಂದುಳಿದಿದ್ದೇವೆ. ಪ್ರವಾಸೋದ್ಯಮ ಕ್ಷೇತ್ರವು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕತೆಯ ಬಹು ಮುಖ್ಯ ಅಂಗವಾಗಿದೆ. ಪ್ರವಾಸೋದ್ಯಮ ಕ್ಷೇತ್ರವು ಅಭಿವೃದ್ಧಿ ಹೊಂದಿದರೆ ಅನೇಕರಿಗೆ ಉದ್ಯೋಗ ಒದಗಿಸಬಹುದು ಎಂಬ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ದಾವಣಗೆರೆ ಜಿಲ್ಲೆಯು ವ್ಯಾಪಾರ ವ್ಯವಹಾರಿಕವಾಗಿ ಹಾಗೂ ಪ್ರಾಕೃತಿಕವಾಗಿ ಅತ್ಯಂತ ಮಹತ್ವದ ಇತಿಹಾಸ ಹೊಂದಿದೆ. ಹಾಗಾಗಿ ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳ ಕುರಿತು ತಿಳಿದುಕೊಳ್ಳಬೇಕು. ಹರಿಹರ ತಾಲ್ಲೂಕಿನಲ್ಲಿ ಬೆಳಕಿಗೆ ಬಾರದ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು ಎಂದರು.
ವ್ಯಂಗ್ಯ ಚಿತ್ರಕಾರ ಹೆಚ್.ಬಿ ಮಂಜುನಾಥ್ ವಿಶೇಷ ಉಪನ್ಯಾಸ ನೀಡಿ, ಪ್ರವಾಸೋದ್ಯಮವು ಜಗತ್ತಿನಲ್ಲಿ ಅತ್ಯಂತ ಮಹತ್ವವಾದ ಅಂಶವಾಗಿದೆ. ಪ್ರವಾಸೋದ್ಯಮ ಕ್ಷೇತ್ರವು ದೇಶದ 9 ಕೋಟಿ ಜನರಿಗೆ ಉದ್ಯೋಗ ಒದಗಿಸಿದ್ದು, ಆರ್ಥಿಕತೆಯ ಒಟ್ಟು ಮೊತ್ತದ ಶೇ.10 ರಷ್ಟು ಆದಾಯವು ಈ ಕ್ಷೇತ್ರದಿಂದ ಬರುತ್ತಿದೆ. ವಿದೇಶದ ಪ್ರವಾಸ ಸ್ಥಾನಗಳಿಗೆ ಭೇಟಿ ನೀಡುವ ಮುನ್ನ ನಮ್ಮ ಸುತ್ತಮುತ್ತಲಿನ ಹಾಗೂ ನೆರೆ-ಹೊರೆಯ ಸ್ಥಳಗಳಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಆ ಸ್ಥಳಗಳ ಇತಿಹಾಸವನ್ನು ತಿಳಿದುಕೊಳ್ಳಬೇಕು.
ನಯಗಾರ ಜಲಪಾತಕ್ಕಿಂತ ಅದ್ಭುತವಾದ ಗೋಕಾಕ್ ಹಾಗೂ ಜೋಗ ಜಲಪಾತಗಳು ನಮ್ಮ ರಾಜ್ಯದಲ್ಲಿವೆ. ಜಗತ್ತಿನ ಯಾವುದೇ ದೇಶದಲ್ಲಿಯೂ ಸಹ ಇಲ್ಲದ ಕಣ್ಮನ ಸೆಳೆಯುವಂತಹ ಕರಾವಳಿ ತೀರಗಳು, ಹಿಮಾಲಯ ಪರ್ವತ, ನಿತ್ಯಹರಿದ್ವರ್ಣ ಕಾಡುಗಳು, ಶಿಲ್ಪಕಲಾ ಸೌಂದರ್ಯ, ವಾಸ್ತುಶಿಲ್ಪಗಳು ನಮ್ಮ ದೇಶದಲ್ಲಿವೆ ಎಂದರು.
ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಭೂಮೇಶ್, ಹರಿಹರದ ದಾದಾಪೀರ್ ಮಾತನಾಡಿದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹರಿಹರ ನಗರಸಭೆ ಅಧ್ಯಕ್ಷರಾದ ಶಾಹೀನಾ ಬಾನು, ಬಿ.ಟಿ ಪ್ರಕಾಶ್, ರೇವಣ ಸಿದ್ದಪ್ಪ ಅಂಗಡಿ ಸೇರಿದಂತೆ ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಇತರರು ಭಾಗವಹಿಸಿದ್ದರು.