Connect with us

Dvgsuddi Kannada | online news portal | Kannada news online

ನಾಳೆ ದಾವಣಗೆರೆ ವಿವಿ ಘಟಿಕೋತ್ಸವ; 44 ವಿದ್ಯಾರ್ಥಿಗಳಿಗೆ  79 ಚಿನ್ನದ ಪದಕ; ಎಂಬಿಎ ವಿಭಾಗದ ಸ್ವಪ್ನ ‘ಚಿನ್ನದ ಹುಡುಗಿ ಗೌರವ’

ದಾವಣಗೆರೆ

ನಾಳೆ ದಾವಣಗೆರೆ ವಿವಿ ಘಟಿಕೋತ್ಸವ; 44 ವಿದ್ಯಾರ್ಥಿಗಳಿಗೆ  79 ಚಿನ್ನದ ಪದಕ; ಎಂಬಿಎ ವಿಭಾಗದ ಸ್ವಪ್ನ ‘ಚಿನ್ನದ ಹುಡುಗಿ ಗೌರವ’

ದಾವಣಗೆರೆ:  ದಾವಣಗೆರೆ ವಿಶ್ವವಿದ್ಯಾನಿಲಯದ 9ನೇ ಘಟಿಕೋತ್ಸವ ನಾಳೆ (ಮಾ.24) ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ನಡೆಯಲಿದೆ.  ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 11,336 ವಿದ್ಯಾರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು. ಜತೆಗೆ  44 ವಿದ್ಯಾರ್ಥಿಗಳು 79 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ತಿಳಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, 2020-21 ನೇ ಸಾಲಿನ ಚಿನ್ನದ ಪದಕ ಗಳಿಕೆಯಲ್ಲಿ ಮಹಿಳಾ ವಿದ್ಯಾರ್ಥಿಗಳು ಮುನ್ನಡೆ ಸಾಧಿಸಿದ್ದು, 32 ವಿದ್ಯಾರ್ಥಿನಿಯರು ಪದಕಗಳನ್ನು ಪಡೆದಿದ್ದಾರೆ. ಆಡಳಿತ ನಿರ್ವಹಣಾ ಶಾಸ್ತ್ರ (ಎಂ.ಬಿ.ಎ) ವಿಭಾಗದ ವಿದ್ಯಾರ್ಥಿನಿ ಸ್ವಪ್ನ ಎಸ್.ಎನ್. 5 ಪದಕಗಳೊಂದಿಗೆ ಚಿನ್ನದ ಹುಡುಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಹಾಗೂ ಈ ಬಾರಿ ವಿವಿಧ ವಿಭಾಗಗಳಲ್ಲಿ 6 ಜನರಿಗೆ ಪಿಎಚ್.ಡಿ ಹಾಗೂ 05 ಎಂ.ಫಿಲ್ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ ಎಂದರು.

ಈ ಬಾರಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಒಟ್ಟು 79 ಸ್ವರ್ಣ ಪದಕಗಳನ್ನು 44 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಸ್ನಾತಕ ವಿಭಾಗದಲ್ಲಿ 21 ಸ್ವರ್ಣ ಪದಕಗಳನ್ನು 13 ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಅವರಲ್ಲಿ 06 ಪುರುಷ ಮತ್ತು 07 ಮಹಿಳಾ ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 31 ವಿದ್ಯಾರ್ಥಿಗಳು 58 ಪದಕಗಳನ್ನು ಗಳಿಸಿದ್ದಾರೆ. ಇವರಲ್ಲಿ 06 ಪುರುಷ ಹಾಗೂ 25 ಮಹಿಳಾ ವಿದ್ಯಾರ್ಥಿಗಳು ಇದ್ದಾರೆ. ಸ್ನಾತಕ ಪದವಿಯ 10 ಹಾಗೂ ಸ್ನಾತಕೋತ್ತರ ಪದವಿಯ 28 ಸೇರಿ ಒಟ್ಟು 38 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಗಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶ್ವವಿದ್ಯಾನಿಲಯವು 2020-21ರ ಅವಧಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾದ 9724 ಸ್ನಾತಕ ಪದವಿ ಹಾಗೂ 1612 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಈ ಬಾರಿ ಪದವಿಯಲ್ಲಿ 5854 ಮಹಿಳೆಯರು ಹಾಗೂ 3870 ಪುರುಷ ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಬಿಎಂ, ಬಿಎಸ್ಸಿ, ಬಿಸಿಎ, ಬಿಎಸ್‍ಡಬ್ಲ್ಯೂ, ಬಿವಿಎ, ಬಿ.ಇಡಿ ಹಾಗೂ ಬಿಬಿಇಡಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪದವಿ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ 1025 ಮಹಿಳಾ ಮತ್ತು 589 ಪುರುಷ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುವರು ಎಂದು ತಿಳಿಸಿದರು.

ಮೂವರಿಗೆ ಗೌರವ ಡಾಕ್ಟರೇಟ್: ಆಯರ್ವೇದ ಮತ್ತು ಯೋಗ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಶಶಿಕುಮಾರ್ ವಿ.ಎಂ, ನಿವೃತ್ತ ಪ್ರಾಧ್ಯಾಪಕರು., ಜನಪದ ತಜ್ಞರಾದ ಡಾ. ಮೀರಾ ಸಾಬಿಹಳ್ಳಿ ಶಿವಣ್ಣ ಮತ್ತು ಇತಿಹಾಸಕಾರರಾದ ಲಕ್ಷ್ಮಣ ಎಸ್ ತೆಲಗಾವಿ ಅವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಾಗುವುದು ಎಂದರು.

ಡಾ. ಪಿ.ವಿ ಕೃಷ್ಣ ಭಟ್ ಅವರು ಘಟೀಕೋತ್ಸವ ಭಾಷಣ : ಈ ಬಾರಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿಗಳಾದ ಡಾ. ಪಿ. ವಿ. ಕೃಷ್ಣ ಭಟ್ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಸ್ನಾತಕ ಪದವಿಯಲ್ಲಿ ಶೇ.65.09 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ.96.41 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ವಿವಿಯ ಎಲ್ಲಾ ಪ್ರಾಧ್ಯಾಪಕ ವೃಂದದವರು ಶ್ರಮಿಸಿದ್ದು, ಪಠ್ಯ ಮತ್ತು ಪ್ರಾಯೋಗಿಕ ತರಗತಿಗಳನ್ನು ಮುಗಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜು ಮಾಡಿರುವುದು ವಿಶೇಷ ಎಂದರು.

ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ: ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಕೊರೋನಾ ಪಿಡುಗಿನ ನಡುವೆಯೂ ವಿಶ್ವವಿದ್ಯಾಲಯದಲ್ಲಿ ಉತ್ತಮ ಕೆಲಸಗಳಾಗಿವೆ. ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳಿಗೆ ಅನುಕೂಲವಾಗಲು ವಿವಿಯಲ್ಲಿ ಭಾಷೆ ಮತ್ತು ಕಂಪ್ಯೂಟರ್ ಲ್ಯಾಬ್‍ಗಳನ್ನು ಆರಂಭಿಸಲಾಗಿದ್ದು ಇದರಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಿದೆ. ನಾನು ಹಳ್ಳಿಗಾಡಿನಿಂದ ಬಂದವನಾದ್ದರಿಂದ ಆ ಕಷ್ಟ ತಿಳಿದು ಈ ಲ್ಯಾಬ್‍ಗಳ ಆರಂಭಕ್ಕೆ ಒತ್ತು ನೀಡಿದೆ, ಹುಳುಪಿನಕಟ್ಟೆ ಹಾಗೂ ಹಾಲುವರ್ತಿ ಗ್ರಾಮಗಳ ವ್ಯಾಪ್ತಿಯಲ್ಲಿ 78 ಎಕರೆ ಭೂಮಿಯನ್ನು ವಿವಿ ವ್ಯಾಪ್ತಿಗೆ ಪಡೆಯಲಾಗಿದ್ದು ಮುಂದಿನ ದಿನಗಳಲ್ಲಿ ಆಹಾರ ಸಂಸ್ಕರಣಾ ಘಟಕ ತರಬೇತಿ ನೀಡಲು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಪ್ರೊ. ಎಸ್.ವಿ. ಹಲಸೆ ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಅನಿತಾ ಹೆಚ್.ಎಸ್, ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ, ಹಣಕಾಸು ಅಧಿಕಾರಿ ಪ್ರಿಯಾಂಕ.ಡಿ, ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮೀ, ಇನಾಯತ್ ವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top